ರಾಜಕೀಯ ಸುದ್ದಿ

2028 ರಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ: ಡಿಸಿಎಂ ಡಿ.ಕೆ.ಶಿವಕುಮಾರ್ ಅಭಿಮತ

Share It

ಕಾರ್ಕಳ (ಉಡುಪಿ):

“ಕಾಂಗ್ರೆಸ್ ಪಕ್ಷದಲ್ಲಿ ನಾಯಕ ಪಟ್ಟವಿಲ್ಲ. ಪಕ್ಷಕ್ಕೆ ದುಡಿಯುವವರೆಲ್ಲರೂ ಕಾರ್ಯಕರ್ತರೇ. 2028 ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ. ಎಲ್ಲಾ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಾಗಿ ದುಡಿಯಬೇಕು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಕಾರ್ಕಳದಲ್ಲಿ ನಡೆದ ಕಾಂಗ್ರೆಸ್ ಕುಟುಂಭೋತ್ಸವ ಸಮಾವೇಶದಲ್ಲಿ ಮಾತನಾಡಿದರು.

“ಬೂತ್ ಮಟ್ಟದಲ್ಲಿ ಯಾರು ಪಕ್ಷಕ್ಕೆ ಹೆಚ್ಚು ಮತಗಳನ್ನು ತಂದುಕೊಡುತ್ತಾರೆಯೋ ಅವರೇ ನಾಯಕರು. ಈ ವಾರ, ಈ ತಿಂಗಳು, ಈ ವರ್ಷ ಪಕ್ಷ ಸಂಘಟನೆಯ ವರ್ಷ. ಬೆಳಗಾವಿಯಲ್ಲಿ ನಡೆದ ಕಾರ್ಯಾಕಾರಿ ಸಮಿತಿಯಲ್ಲಿ ಈ ವರ್ಷವನ್ನು ಪಕ್ಷ ಸಂಘಟನೆಯ ವರ್ಷ ಎಂದು ತೀರ್ಮಾನ ಮಾಡಲಾಗಿದೆ” ಎಂದರು.

“ಪಕ್ಷದ ಎಲ್ಲಾ ಹಂತಗಳ ಹಾಗೂ ಎಲ್ಲಾ ವಿಭಾಗಗಳನ್ನು ನೇಮಕಾತಿಯನ್ನು ಆದಷ್ಟು ಬೇಗ ಭರ್ತಿ ಮಾಡಬೇಕು. ಆದಷ್ಟು ಬೇಗ ಎಲ್ಲರಿಗೂ ಜವಾಬ್ದಾರಿ ನೀಡಬೇಕು. ಕಾಂಗ್ರೆಸ್ ಪಕ್ಷ ಇಲ್ಲದೇ ಹೋದರೆ ಈ ದೇಶ ಒಗ್ಗಟ್ಟಾಗಿ ಇರಲು ಸಾಧ್ಯವಿಲ್ಲ. ನಮ್ಮ ಪಕ್ಷ ಮಾತ್ರ ದೇಶವನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗಲು ಸಾಧ್ಯ. ಸಂವಿಧಾನವೇ ನಮ್ಮ ಗ್ರಂಥ” ಎಂದರು.

“ಮುಂದಿನ ಚುನಾವಣೆಯಲ್ಲಿ ಪರಶುರಾಮನ ಬೆಟ್ಟವನ್ನು ನೋಡಿ ಜನರು ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡುತ್ತಾರೆ. ಎನ್ನುವ ವಿಶ್ವಾಸ ನನಗಿದೆ. ಮತದಾರರಿಗೆ ಪರಶುರಾಮನ ಹೆಸರಿನಲ್ಲಿ ಬಿಜೆಪಿಯವರು ಭವ್ಯ ಕೆಲಸ ಮಾಡಿದ್ದಾರೆ ಎಂದು ತೋರಿಸಬೇಕು” ಎಂದು ಹೇಳಿದರು.

“ಕಾಂಗ್ರೆಸ್ ಪಕ್ಷ ತನಗೆ ಅವಕಾಶ ಸಿಕ್ಕಾಗಲೆಲ್ಲಾ ಜನಪರವಾದ ಕೆಲಸಗಳನ್ನು ಮಾಡಿದೆ. ಆದರೆ ಬಿಜೆಪಿಯವರ ಸಾಧನೆ ಕೇವಲ ಆಪರೇಷನ್ ಕಮಲ. ಬಿಜೆಪಿ ಸಂಸದ ಸುಧಾಕರ್ ಅವರು ನಮ್ಮನ್ನು ರಾಜಕೀಯ ಸಮಾಧಿ ಮಾಡಿದರು ಎಂದು ಮಾತನಾಡಿದ್ದನ್ನು ಇತ್ತೀಚಿಗೆ ಎಲ್ಲರೂ ಕೇಳಿದ್ದಾರೆ” ಎಂದರು.

“ಸಮ್ಮಿಶ್ರ ಸರ್ಕಾರವನ್ನು ಬೀಳಿಸಿದಾಗ ನಾನು ಆಪರೇಷನ್ ಕಮಲಕ್ಕೆ ಒಳಗಾದವರಿಗೆ ಒಂದು ಮಾತು ಹೇಳಿದ್ದೆ. ನೀವೆಲ್ಲರೂ ರಾಜಕೀಯವಾಗಿ ಸಮಾಧಿಯಾಗುತ್ತೀರಿ ಎಂದು ಹೇಳಿದ್ದೆ. ಈಗ‌ ಎಷ್ಟು ಜನ ಗೆದ್ದಿದ್ದಾರೆ, ಸೋತಿದ್ದಾರೆ ಎನ್ನುವುದನ್ನು ನೋಡಬೇಕು. ಬಿಜೆಪಿಯವರು ಅಚಾನಕ್ ಆಗಿ ಅಧಿಕಾರಕ್ಕೆ ಬಂದಿದ್ದಾರೆ. ನಮ್ಮ ಕಾಂಗ್ರೆಸ್ ಪಕ್ಷಕ್ಕೆ ದೀರ್ಘ ಇತಿಹಾಸವಿದೆ. ಜನ ಪರವಾಗಿ ಕೆಲಸ ಮಾಡಿರುವವರು ನಾವು ಮಾತ್ರ. ಬಿಜೆಪಿಯವರು ಒಂದೇ ಒಂದು ಜನಪರ ಕೆಲಸ ಮಾಡಿಲ್ಲ” ಎಂದು ಹೇಳಿದರು.

“ಪರಶುರಾಮನ ಪ್ರತಿಮೆಯನ್ನು ಯಾವ ಸ್ಥಿತಿಗೆ ಬಿಜೆಪಿಯವರು ತಂದಿದ್ದಾರೆ ಎಂದು ಜಿಲ್ಲೆಯ ‌ಜನರಿಗೆ ಕಾಂಗ್ರೆಸ್ ನಾಯಕರು ಪ್ರವಾಸ ಏರ್ಪಡಿಸಿ ತೋರಿಸಬೇಕು. ಇಂತಹ ಪುಣ್ಯಭೂಮಿಯಲ್ಲಿ ದೇವರನ್ನು ಕೆಟ್ಟ ಸ್ಥಿತಿಗೆ ಬಿಜೆಪಿಯವರು ತಂದಿದ್ದಾರೆ” ಎಂದು ಹೇಳಿದರು.

“ಹಿಂದುತ್ವದ ಭೂಮಿಗೆ ಸ್ವಾಗತ ಎಂದು ಬಿಜೆಪಿಯ ಸುನೀಲ್ ಕುಮಾರ್ ಅವರು ಹೇಳಿದ್ದರು. ಅದಕ್ಕೆ ಪಕ್ಷದ ಮುಖಂಡರಾದ ಸುದೀರ್ ಕುಮಾರ್ ಮುರೊಳ್ಳಿ ಅವರು ಅತ್ಯುತ್ತಮವಾಗಿ ಉತ್ತರ ನೀಡಿದ್ದಾರೆ. ಬಿಜೆಪಿಯವರು ಮೊದಲು ಅವರ ಮನೆಯನ್ನು ರಿಪೇರಿ ಮಾಡಿಕೊಳ್ಳಲಿ. ಬಿಜೆಪಿಯವರ ಎಲ್ಲಾ ಹೇಳಿಕೆಗೂ ನಾನು ಉತ್ತರ ನೀಡಲು ಹೋಗುವುದಿಲ್ಲ. ಬಿಜೆಪಿಯ ಸುನೀಲ್ ಕುಮಾರ್ ಹಾಗೂ ನಮ್ಮ ಸುಧೀರ್ ಕುಮಾರ್ ಅವರನ್ನು ಒಂದು ವೇದಿಕೆಯಲ್ಲಿ ಎದುರು ಬದುರು ನಿಲ್ಲಿಸೋಣ. ನಮ್ಮ ಕಾಂಗ್ರೆಸ್ ಪಕ್ಷದ ಸಾಧನೆ ಸೇರಿದಂತೆ ಎಲ್ಲದರ ಬಗ್ಗೆ ಉತ್ತರ ನೀಡಲು ಸುಧೀರ್ ಕುಮಾರ್ ಒಬ್ಬರೇ ಸಾಕು. ಮಾಧ್ಯಮದವರಲ್ಲಿ ಮನವಿ ಮಾಡುತ್ತೇನೆ. ಈ ಇಬ್ಬರಿಗೂ ಒಂದು ವೇದಿಕೆಯಲ್ಲಿ ಚರ್ಚೆ ಏರ್ಪಡಿಸಿ” ಎಂದರು.

“ಬಿಜೆಪಿಯವರು ನಮ್ಮ ಯೋಜನೆಗಳ ಬಗ್ಗೆ ಏನು ಬೇಕಾದರೂ ಟೀಕೆ ಮಾತನಾಡಿಕೊಳ್ಳಲಿ ಕಾಂಗ್ರೆಸ್ ಕಾರ್ಯಕರ್ತರು ತಲೆ ಕೆಡಿಸಿಕೊಳ್ಳುವುದು ಬೇಡ. ನಾವು ನಮ್ಮ ಕೆಲಸವನ್ನು ಮಾಡುತ್ತಾ ಹೋಗೋಣ. ಪ್ರತಿ ಬೂತ್ ಮಟ್ಟದಲ್ಲಿ ಜನರ ಹೃದಯವನ್ನು ಗೆಲ್ಲಬೇಕು. ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕು. ಕಾರ್ಕಳದಿಂದ ಮುಂದಿನ ಬಾರಿ ವಿಧಾನಸಭೆಯಲ್ಲಿ ಶಾಸಕರು ಕುಳಿತುಕೊಳ್ಳುವಂತೆ ಕೆಲಸ ಮಾಡಬೇಕು” ಎಂದು ತಿಳಿಸಿದರು.

“ಬಿಜೆಪಿಯವರು ದೇವರ ಹೆಸರಿನಲ್ಲಿ ಕೇವಲ ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಧರ್ಮ, ಆಚರಣೆ ಇವೆಲ್ಲವೂ ವೈಯಕ್ತಿಕವಾದ ಸಂಗತಿಗಳು. ಬಿಜೆಪಿಯವರು ಹಿಂದು ನಾವು ಮುಂದು ಎಂದು ಹೇಳುತ್ತಾರೆ. ನಾವು ಈ ರೀತಿ ಹೇಳುವುದಿಲ್ಲ. ಏಕೆಂದರೆ ನಾವು ಇಲ್ಲಿ ಎಲ್ಲಾ ಧರ್ಮದ ಜಾತಿಯ ಜನರು ಇದ್ದೇವೆ. ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಲಿಂಗಾಯತ, ಒಕ್ಕಲಿಗ, ಬಂಟ, ಪೂಜಾರಿ, ಶೆಟ್ಟಿಗಳು ಇದ್ದೇವೆ” ಎಂದರು.

“ನಾವು ಶಾಲೆಗೆ ಹೋಗುವ ಸಮಯದಲ್ಲಿ ನಮ್ಮೆಲ್ಲರಿಗೆ ಜಾತಿ ತಿಳಿದಿತ್ತೇ? ಸೂರ್ಯ, ಚಂದ್ರ, ಗಾಳಿ, ನೀರು, ಬೆಳಕಿಗೆ ಜಾತಿ ಇದೆಯೇ? ನಾವುಗಳು ಯಾರೂ ಸಹ ಇಂತಹ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ಎಷ್ಟೋ ಜನ ನಮಗೆ ಜಾತಿ,‌ಧರ್ಮ ಯಾವುದೂ ಬೇಡ ಎಂದು ಹೇಳುತ್ತಾರೆ. ಆದರೆ ಮಗ ಹುಟ್ಟಿದಾಗ ಕಿವಿ ಚುಚ್ಚುವುದು, ಉಡಿದಾರ ಕಟ್ಟುವುದು, ನಾಮಕರಣ ಮಾಡುವುದು ಸೇರಿದಂತೆ ಅಂತರರ್ಜಾತಿ ವಿವಾಹ ಆದವರು ಮುಪ್ಪಾಗಿ ತೀರಿ ಹೋದಾಗ ಅವರನ್ನು ಯಾವ ರೀತಿ ಸಂಸ್ಕಾರ ಮಾಡಬೇಕು ಎಂದು ಧರ್ಮ ತೀರ್ಮಾನ ಮಾಡುತ್ತದೆ” ಎಂದರು.

“ಜಾತಿ- ಧರ್ಮ ರಾಜಕಾರಣದಿಂದ ಈ ದೇಶಕ್ಕೆ ಒಳ್ಳೆಯದು ಆಗುವುದಿಲ್ಲ. ಶಾಲಾ ಮಕ್ಕಳಿಗೆ ಜಾತಿ ನೋಡಿ ಕ್ರೀಡೆಗಳನ್ನು ಆಯೋಜನೆ ಮಾಡಲಾಗುತ್ತದೆಯೇ? ಪರೀಕ್ಷೆಗಳಲ್ಲಿ ಅಂಕ ನೀಡಲಾಗುತ್ತದೆಯೇ? ಉತ್ತಮ ಕಲೆ, ಸಾಹಿತ್ಯವನ್ನು ಜಾತಿ ಮೇಲೆ ನೋಡಲಾಗುತ್ತದೆಯೇ” ಎಂದರು.

“ದಾನ,‌‌ ಧರ್ಮ ಮಾಡುವ ಕೈ ಅಧಿಕಾರಕ್ಕೆ ಬಂದ ತಕ್ಷಣ ಕ್ಯಾಬಿನೆಟ್ ಸಭೆ ಮಾಡಿ ಎಲ್ಲಾ ಗ್ಯಾರಂಟಿ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ ನೀಡಿದೆವು. ಅನೇಕ ಕಾರ್ಯಕರ್ತರು ಇದು ಸಾಧ್ಯವಿಲ್ಲ ಎಂದುಕೊಂಡಿದ್ದರು. ಆದರೆ ನಾವು ಇಂದು ನುಡಿದಂತೆ ನಡೆದಿದ್ದೇವೆ” ಎಂದು ಹೇಳಿದರು.

“ಬಿಜೆಪಿಯವರು ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡಿದರೆ ಏನೂ ಆಗುವುದಿಲ್ಲ. ಅವರಿಗೆ ಅವಕಾಶ ಸಿಕ್ಕಾಗ ಈ ರೀತಿಯ ಕೆಲಸ ಮಾಡಿದ್ದರೆ, ಒಂದೇ ಒಂದು ಉದಾಹರಣೆ ನೀಡಲಿ. ಕಾಂಗ್ರೆಸ್ ಕೊಟ್ಟಿರುವ ಯೋಜನೆಗಳನ್ನು ಜನರು ಅನುಭವಿಸಬೇಡಿ ಎಂದು ಬಿಜೆಪಿಯವರು ಜನರಿಗೆ ಎಲ್ಲಾ ಯೋಜನೆಗಳನ್ನು ಬಿಟ್ಟು ಬಿಡಿ ಎಂದು ಹೇಳುವ ಬದ್ದತೆ ತೋರಿಸಲಿ. ಈ ಕೆಲಸ ಅವರಿಂದ ಸಾಧ್ಯವಿಲ್ಲ” ಎಂದರು.

“ಈ ವರ್ಷ ಪಕ್ಷ ಸಂಘಟನೆಯ ವರ್ಷ. ಕಾಂಗ್ರೆಸ್ ಅಧ್ಯಕ್ಷನಾಗಿ ಬ್ಲಾಕ್ ಕಾಂಗ್ರೆಸ್ ಸೇರಿದಂತೆ ಎಲ್ಲಾ ಸ್ಥಳೀಯ ನಾಯಕರಿಗೆ ನಾನು ಪ್ರಮಾಣ ವಚನ ಬೋಧನೆ ಮಾಡಿದ್ದು ಸಂತಸ ತಂದಿತು. ಪರಾಜಿತ ಅಭ್ಯರ್ಥಿಗಳು, ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಬ್ಲಾಕ್ ಮಟ್ಟದ ಅಧ್ಯಕ್ಷರು ಸೇರಿದಂತೆ ಎಲ್ಲರು ತಮ್ಮ ಕ್ಷೇತ್ರಗಳಲ್ಲಿ ಸಭೆಗಳನ್ನು ನಡೆಸಬೇಕು. ಆಸ್ಪತ್ರೆ, ಆರಾಧನಾ, ಬಗರ್ ಹುಕುಂ, ಆಶ್ರಯ ಸಮಿತಿಯವರೆಲ್ಲಾ ಸೇರಿ ಸಭೆಗಳಲ್ಲಿ ಭಾಗವಹಿಸಬೇಕು. ತಳಮಟ್ಟದಿಂದ ಪಕ್ಷವನ್ನು ಸಂಘಟನೆ ಮಾಡಬೇಕು” ಎಂದರು.

“ಮಾರ್ಚ್ 11 ಬಂದರೆ ನಾನು ಪಕ್ಷದ ಅಧ್ಯಕ್ಷನಾಗಿ ಅಧಿಕಾರವಹಿಸಿಕೊಂಡು 5 ವರ್ಷ ಪೂರೈಸುತ್ತಾ ಬಂದಿದೆ. ಅಂದು ಸೋನಿಯಾ ಗಾಂಧಿ ಅವರು ಕರೆ ಮಾಡಿ ಶಿವಕುಮಾರ್ ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಹೇಳಿದ್ದರು. ನಾನು ಕಷ್ಟಕಾಲದಲ್ಲಿ ಜವಾಬ್ದಾರಿವಹಿಸಿಕೊಂಡೆ. ನಾವು ಆಗ ಉಪಚುನಾವಣೆಯಲ್ಲಿ ಸೋತಿದ್ದೆವು. ಇದರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಸಿದ್ದರಾಮಯ್ಯ ಅವರೂ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನನ್ನನ್ನು ಹಾಗೂ ಸಿದ್ದರಾಮಯ್ಯ ಅವರನ್ನು ಸೋನಿಯಾ ಗಾಂಧಿ ಅವರು ಮರು ಆಯ್ಕೆ ಮಾಡಿದರು” ಎಂದರು.

“ರಾಜೀವ್ ಗಾಂಧಿ ಅವರು ಪ್ರಧಾನಿಗಳಾಗಿದ್ದ ಸಮಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಗೆ ತಿದ್ದುಪಡಿ ತಂದರು. ನಾನು ಅವರನ್ನು ಭೇಟಿಯಾದಾಗ ಯಾವ ಕಾರಣಕ್ಕೆ ತಿದ್ದುಪಡಿ ಮಾಡಿದಿರಿ ಎಂದು ಕೇಳಿದಾಗ, ‘ಪ್ರತಿ ಊರಿನಿಂದಲೂ ನಾಯಕರು ಹೊರಗೆ ಬರಬೇಕು. ಪಂಚಾಯತಿಯಿಂದ ಪಾರ್ಲಿಮೆಂಟ್ ವರೆಗೂ ನಾಯಕರು ಬೆಳೆಯಬೇಕು’ ಎಂದು ಹೇಳಿದರು. ಈ ತಿದ್ದುಪಡಿಯಿಂದ ನೂರಾರು ನಾಯಕರು ರಾಜಕೀಯಕ್ಕೆ ಬಂದರು” ಎಂದರು.

“ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಗಳಾಗಿದ್ದಾಗ ಆಹಾರ ಭದ್ರತಾ ಕಾಯ್ದೆ, ನರೇಗಾ, ಶಿಕ್ಷಣದ ಹಕ್ಕು, ಅರಣ್ಯಭೂಮಿ ಹಕ್ಕು ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ನೀಡಿದರು. 2013 ರ ಸರ್ಕಾರದ ವೇಳೆ ಪರಿಶಿಷ್ಟ ಜನಾಂಗ ಹಾಗೂ ಪಂಗಡದವರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಹಣ ಮೀಸಲು ಇಟ್ಟವರು ನಾವು” ಎಂದು ಹೇಳಿದರು.

“ಕರಾವಳಿ ಭಾಗದ ಜನ ಸೌದಿ, ಮುಂಬೈ, ಬೆಂಗಳೂರು ಸೇರಿದಂತೆ ಇತರೇ ಪ್ರದೇಶಗಳಿಗೆ ಉದ್ಯೋಗ ಅರಸಿ ಹೋಗುತ್ತಿದ್ದಾರೆ. ಇವರಿಗೆ ಸ್ಥಳೀಯವಾಗಿ ಉದ್ಯೋಗ ದೊರೆಯುವ ಯೋಜನೆ ನಾವು ಮಾಡಬೇಕು. ವಲಸೆ ಹೋಗುವುದನ್ನು ತಪ್ಪಿಸಬೇಕು. ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶವಿದೆ. ಸ್ಥಳೀಯವಾಗಿ ಉದ್ಯೋಗ ದೊರೆಯಬೇಕು ಎನ್ನುವ ಕಾಯ್ದೆ ಮಾಡಿದ್ದೇವೆ. ಸದ್ಯದಲ್ಲೇ ನೂತನ ಪ್ರವಾಸೋದ್ಯಮ ನೀತಿ ಮಾಡುತ್ತಿದ್ದೇವೆ” ಎಂದರು.

“ನಾನು ವೀರಪ್ಪ ಮೊಯ್ಲಿ ಅವರ ಶಿಷ್ಯ. ಶಿಷ್ಯನೊಬ್ಬ ಗುರುಗಳಿಗೆ ಅಭಿನಂದನೆ ಮಾಡುವುದು ಬಹಳ ಮುಜುಗರದ ವಿಚಾರ. 45 ಕ್ಕೂ ಹೆಚ್ಚು ಯುವ ಮುಖಗಳಿಗೆ ಸಾರ್ವಜನಿಕ ಜೀವನಕ್ಕೆ ಬರಲು ಅವಕಾಶ ಕಲ್ಪಿಸಿಕೊಟ್ಟವರು. ವೀರಪ್ಪ ಮೊಯ್ಲಿ ಅವರಿಗೆ ಇನ್ನೂ ಹೆಚ್ಚು ಜನಸೇವೆ ಮಾಡುವ ಅವಕಾಶ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ” ಎಂದರು.

ಮಾಧ್ಯಮ ಪ್ರತಿಕ್ರಿಯೆ

“ಗೊಂದಲ ಉಂಟಾಗಲಿ. ಅವರು, ನೀವು, ಎಲ್ಲರೂ ಗೊಂದಲಕ್ಕೆ ಒಳಗಾಗಿ” ಎಂದು ಡಿಸಿಎಂ ಮಾರ್ಮಿಕವಾಗಿ ನುಡಿದರು.

ನೀವು ಗೊಂದಲ ಉಂಟು ಮಾಡುತ್ತಾ ಇದ್ದಿರಾ ಎಂದು ಕೇಳಿದಾಗ, “ಕಲ್ಲಡ್ಕ ಪ್ರಭಾಕರ್ ಭಟ್ ಅವರು ಏಸು ಕುಮಾರ ಎಂದು ಕರೆದಿದ್ದರು. ಆಗ ಏಕೆ ಅದಕ್ಕೆ ಯಾರೂ ಕಥೆ ಕಟ್ಟಲಿಲ್ಲ. ಇನ್ನೇನೋ ಕರೆದಾಗ ಏಕೆ ಏನೂ ಮಾತನಾಡಲಿಲ್ಲ. ನಮ್ಮ ಬಗ್ಗೆ ಮಾತನಾಡಲಿಲ್ಲ ಎಂದರೆ ಅವರಿಗೆ ಸಮಾಧಾನವಿರುವುದಿಲ್ಲ. ಮಾಧ್ಯಮದವರಿಗೆ ನಮ್ಮ ಸುದ್ದಿ ಹಾಕದೇ ಹೋದರೆ ಟಿಆರ್ ಪಿ ಏರುವುದಿಲ್ಲ” ಎಂದರು.

ಅದಿಕಾರ ಹಂಚಿಕೆ ಎಂಬುದು ಸುಳ್ಳೇ ಎಂದು ಕೇಳಿದಾಗ,‌”2028 ಕ್ಕೆ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ” ಎಂದರು.

ಚಲನಚಿತ್ರದವರು ನಿಮ್ಮ ಮೇಲೆ ಬೇಸರವಾಗಿದ್ದಾರೆ ಎಂದಾಗ, “ಚಲನಚಿತ್ರದವರು, ಅಶೋಕ್ ಏನಾದರೂ ಮಾತನಾಡಿಕೊಳ್ಳಲಿ. ನಾನು ನನಗೆ ತಿಳಿದ ಸತ್ಯವನ್ನು ಹೇಳಿದ್ದೇನೆ. ಅವರು ಪ್ರತಿಭಟನೆ,‌ ಹೋರಾಟ ಮಾಡಲಿ. ನೆಲ ಜಲಕ್ಕಾಗಿ ಪಕ್ಷಾತೀತವಾಗಿ ಬೆಂಬಲ ನೀಡುತ್ತೇವೆ ಎಂದು ಹೇಳಿದವರು. ಮೇಕೆದಾಟು ಹೋರಾಟ ನಡೆಯುವಾಗ ಬರಲಿಲ್ಲ. ಇದೇ ನಟ ಪ್ರೇಮ್ ಹೋರಾಟಕ್ಕೆ ಬಂದು ಬಿಜೆಪಿಯವರಿಂದ ಕೇಸ್ ಹಾಕಿಸಿಕೊಂಡರು. ದುನಿಯಾ ವಿಜಯ್, ಸಾಧು ಕೋಕಿಲ ಅವರ ಮೇಲೂ ಕೇಸ್ ಹಾಕಲಾಯಿತು. ನಮ್ಮ‌ ಮೇಲೆ ಹಾಕಲಿ ಅವರ ಮೇಲೆ ಏಕೆ?” ಎಂದರು.

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರ ಉತ್ಸವ ಯಾರ ಕಾರ್ಯಕ್ರಮ. ಸರ್ಕಾರದ್ದೇ? ಅದು ಚಲನಚಿತ್ರ ರಂಗದ ಕಾರ್ಯಕ್ರಮ. ಅದಕ್ಕೆ ಎಲ್ಲರೂ ಸಹಕಾರ ನೀಡಬೇಕಲ್ಲವೇ? ಚಲನಚಿತ್ರ ರಂಗ ಸತ್ತು ಹೋಯಿತು. ಟಾಕೀಸ್ ಗಳು ಮುಚ್ಚಿ ಹೋದವು, ಊಟ ಇಲ್ಲ ಎಂದು ಮಾತನಾಡುತ್ತಾರೆ. ಯಾರಿಗಾಗಿ ಚಲನಚಿತ್ರ ಉತ್ಸವ ಮಾಡುತ್ತಿರುವುದು?” ಎಂದರು.

“ಚಿತ್ರರಂಗ ಎಂದರೆ ಕ್ಯಾಮೆರಾಮೆನ್, ಬರಹಗಾರ, ಲೈಟ್ ಬಾಯ್ , ನಿರ್ಮಾಪಕ, ‌ನಿರ್ದೇಶಕ ಸೇರಿದಂತೆ ಎಲ್ಲರೂ ಸೇರಿದ್ದಾರೆ. ಅವರ ಹಬ್ಬವನ್ನು ಅವರೇ ಸಂಭ್ರಮಿಸಲಿಲ್ಲ ಎಂದರೆ?” ಎಂದರು.

ಚಲನಚಿತ್ರದವರು ಕಾಂಗ್ರೆಸ್ ಕಾರ್ಯಕರ್ತರೇ ಎನ್ನುವ ಅಶೋಕ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಕಾಂಗ್ರೆಸ್ ಕಾರ್ಯಕರ್ತರು ಎಂದಲ್ಲ. ಉತ್ಸವ ಚಿತ್ರರಂಗದವರ ಕಾರ್ಯಕ್ರಮ. ಇತ್ತೀಚಿಗೆ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿದೆವು. ಅವರೆಲ್ಲಾ ಕಾಂಗ್ರೆಸ್ ಕಾರ್ಯಕರ್ತರೇ? ಗ್ಯಾರಂಟಿ ಯೋಜನೆಗಳನ್ನು ಬಿಜೆಪಿಯವರಿಗೆ ನೀಡುತ್ತಾ ಇದ್ದೇವೆಯೇ? ಬಿಜೆಪಿಯವರು ತಮ್ಮ ಕಾರ್ಯಕರ್ತರಿಗೆ ಗ್ಯಾರಂಟಿ ಯೋಜನೆಗಳನ್ನು ಪಡೆಯಬೇಡಿ ಎಂದು ಕರೆ ನೀಡಲಿ. ಉಳುವವನೆ ಭೂಮಿಯ ಒಡೆಯ ಯೋಜನೆಯ ಲಾಭವನ್ನು ಎಲ್ಲರೂ ಪಡೆದಿದ್ದಾರೆ. ಬೇರೆ ಪಕ್ಷದವರೂ ಇದನ್ನು ಅನುಭವಿಸುತ್ತಿದ್ದಾರೆ. ಬಸ್ ಅಲ್ಲಿ ಬಿಜೆಪಿಯವರು ದುಡ್ಡು ಕೊಟ್ಟು ಓಡಾಡಲಿ. ಜನ ಸರಿ ಇದ್ದಾರೆ. ಆದರೆ ಈ ನಾಯಕರಿಗೆ ಅಸೂಯೆ. ನಮಗೆ ಸಿಗಲಿಲ್ಲವಲ್ಲ ಎಂದು ಹೊಟ್ಟೆ ಉರಿಯಿಂದ ಸಾಯುತ್ತಿದ್ದಾರೆ” ಎಂದರು.

ನಿಮ್ಮ ಭೇಟಿಯಿಂದ ಕರಾವಳಿ ಯುವಕರಲ್ಲಿ ಸಂಚಲನ ಉಂಟಾಗಿದೆ ಎಂದಾಗ, “ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುವುದು. ಎಚ್ ಕೆ. ಪಾಟೀಲ್ ಅವರಿಗೆ ಹೇಳಿ ವಿಶೇಷ ಯೋಜನೆ ಪ್ರವಾಸೋದ್ಯಮ ನೀತಿ ಮಾಡಲಾಗುವುದು. ಜನರು ಕೆಲಸಕ್ಕಾಗಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಈ ಭಾಗದಲ್ಲಿ ಪ್ರಜ್ಞಾವಂತರು, ಬುದ್ದಿವಂತರು ಇದ್ದಾರೆ. ಅವರೆಲ್ಲಾ ಇಲ್ಲೇ ಉಳಿಯಬೇಕು” ಎಂದರು.


Share It

You cannot copy content of this page