ಬೆಳಗಾವಿ : ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸರು ಜಿಲ್ಲಾ ನಗರಾಭಿವೃದ್ಧಿ ಕೋಶದ ಎಇಇ ಅಜಯಸಿಂಗ್ ಬಾಪುಸಿಂಗ್ ರಜಪೂತ ಅವರ ನಿವಾಸದ ಮೇಲೆ ಶುಕ್ರವಾರ ದಾಳಿ ನಡೆಸಿ, ಕೆಜಿಗಟ್ಟಲೇ ಚಿನ್ನಾಭರಣ ಸೇರಿದಂತೆ ಕೋಟ್ಯಂತರ ರೂ.
ಮೌಲ್ಯದ ಆಸ್ತಿ ಪತ್ತೆಹಚ್ಚಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಜಪೂತ ಅವರ ಮನೆ, ಕಚೇರಿ, ಬ್ಯಾಂಕ್ ಲಾಕರ್ ಸೇರಿದಂತೆ ಒಟ್ಟು ಏಳು ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಿಲಾಗಿದ್ದು, ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಲಾಯಿತು.
ಒಟ್ಟಾರೆ 14 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ ಪತ್ತೆಯಾಗಿದೆ. ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗಾವಿ ನಗರದಲ್ಲಿ ಮೂರು ಮನೆಗಳು ಹಾಗೂ ಸವದತ್ತಿ, ಹುಕ್ಕೇರಿ ಮತ್ತು ಹುಬ್ಬಳ್ಳಿ ನಗರಗಳಲ್ಲಿ ಐದು ನಿವೇಶನಗಳು ಪತ್ತೆಯಾಗಿವೆ. ಇದರೊಂದಿಗೆ 5 ಕೆಜಿ 960 ಗ್ರಾಂ ಚಿನ್ನ ಮತ್ತು ವಜ್ರಾಭರಣಗಳು, 5 ಕೆಜಿ ಬೆಳ್ಳಿ ವಸ್ತುಗಳು, 3.12 ಕೋಟಿ ರೂ.ಮೌಲ್ಯದ ಬ್ಯಾಂಕ್ ಎಫ್‌ಡಿಗಳು, ಒಂದು ಕಾರು ಮತ್ತು ಬೈಕ್ ವಶಕ್ಕೆ ಪಡೆಯಲಾಗಿದೆ.

