ಬೆಂಗಳೂರು: ತಂದೆ ಮತ್ತು ಮಗ ಶವವಾಗಿ ಪತ್ತೆಯಾಗಿದ್ದ ಪ್ರಕರಣದಲ್ಲಿ ಟ್ವಿಸ್ಟ್ ಸಿಕ್ಕಿದ್ದು, ಪತ್ನಿಯೇ ಪ್ರಿಯಕರನ ಜತೆ ಸೇರಿ ಗಂಡ ಮತ್ತು ಮಗನನ್ನು ಕೊಂದು ಹಾಕಿರುವುದು ಬೆಳಕಿಗೆ ಬಂದಿದೆ.
ನಗರದ ಚಿಕ್ಕಬಾಣಾವರದಲ್ಲಿ ನೆನ್ನೆ ಆರು ವರ್ಷದ ಮಗು ಯದುವೀರ್ ಮತ್ತು ತಂದೆ ಅಭಿನಂದನ್ ಕೊಲೆಯಾಗಿದ್ದರು. ಮನೆಯಲ್ಲಿಯೇ ಇದ್ದ ಪತ್ನಿ ರಾತ್ರಿ ಊಟ ಮಾಡಿ ಮಲಗಿದ್ದವರು ಮೇಲೇಳಲಿಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಳು. ಆದರೆ ಅನುಮಾನಗೊಂಡು ಪರಿಶೀಲನೆ ನಡೆಸಿದ ಪೊಲೀಸರಿಗೆ ಹರಿಣಿಯ ಕೈವಾಡ ಇರುವುದು ಗೊತ್ತಾಗಿದೆ.
ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಆಕೆ ತಾನು ತನ್ನ ಪ್ರಿಯಕರನ ಜತೆಗೆ ಸೇರಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ರಾತ್ರಿ 11 ಗಂಟೆಗೆ ಪ್ರಿಯಕರ ವಿನಯ್ ನನ್ನು ಕರೆಸಿಕೊಂಡಿದ್ದ ಹರಿಣಿ, ಗಂಡನ ತಲೆಗೆ ಹೊಡೆದು ಕೊಲೆ ಮಾಡಿದ್ದು, ನಂತರ ಮಗುವನ್ನು ಉಸಿರುಗಟ್ಟಿಸಿ ಕೊಂದಿದ್ದಾಗಿ ತಿಳಿಸಿದ್ದಾಳೆ.
ರಾತ್ರಿಯೇ ರಕ್ತವಾಗಿದ್ದ ಗಂಡನ ಬಟ್ಟೆ ಬದಲಾಯಿಸಿ, ರಕ್ತದ ಕಲೆಯನ್ನು ತೊಳೆದು, ರಕ್ತಸಿಕ್ತ ಬಟ್ಟೆಗಳನ್ನು ತೊಳೆದು ಒಣಹಾಕಿದ್ದಳು ಎನ್ನಲಾಗಿದೆ. ಇದೀಗ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು, ಪ್ರಿಯಕರ ವಿನಯ್ ಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.

