ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ನರೇಗಾ) ಸ್ಥಾನದಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಹೊಸ ಕಾನೂನು ‘ವಿಕಸಿತ ಭಾರತ ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) – ವಿಬಿ ಜಿರಾಮ್ಜಿ’ ಜುಲೈ 1 ರಿಂದ ಅನುಷ್ಠಾನಕ್ಕೆ ಬರಲಿದೆ. ಸೋಮವಾರ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದೆ.
ಮುಂದಿನ ಪೀಳಿಗೆಗೆ ಗ್ರಾಮೀಣ ಅಭಿವೃದ್ಧಿಯ ಹೊಸ ಚೌಕಟ್ಟನ್ನು ರೂಪಿಸುವ ಈ ಕಾಯ್ದೆ, 2047 ರೊಳಗೆ ವಿಕಸಿತ ಭಾರತದ ಗುರಿಯನ್ನು ತಲುಪಲು ಸಹಕಾರಿಯಾಗಲಿದೆ ಎಂದು ಸರ್ಕಾರ ಹೇಳಿದೆ.
ಹೊಸ ಕಾಯ್ದೆಯ ಪ್ರಮುಖ ಬದಲಾವಣೆಗಳು:
· ಗ್ರಾಮೀಣ ಕುಟುಂಬದ ವ್ಯಕ್ತಿಯೊಬ್ಬರು ನರೇಗಾದ 100 ದಿನಗಳ ಬದಲಿಗೆ 125 ದಿನಗಳ ಕೆಲಸವನ್ನು ಈ ಕಾಯ್ದೆಯಡಿ ಪಡೆಯುತ್ತಾರೆ.
· ನೀರಾವರಿ, ಮೂಲ ಸೌಕರ್ಯ, ಜೀವನೋಪಾಯಕ್ಕೆ ಪೂರಕವಾದ ಮೂಲಸೌಕರ್ಯ ಮತ್ತು ಹವಾಮಾನ ವೈಪರೀತ್ಯ ನಿರ್ವಹಣೆ (ಪ್ರವಾಹ ನಿಯಂತ್ರಣಕ್ಕೆ ಚರಂಡಿ, ಬರ ನಿವಾರಣೆಗೆ ಕೆರೆ ಹೂಳೆತ್ತುವುದು/ಹೊಸ ಕೆರೆ) ಇತ್ಯಾದಿ ಕೆಲಸಗಳನ್ನು ಕೈಗೊಳ್ಳಲಾಗುತ್ತದೆ.
· ‘ವಿಕಸಿತ ಗ್ರಾಮ ಪಂಚಾಯಿತಿ ಯೋಜನೆ’ ಪರಿಚಯಿಸಲಾಗಿದೆ. ಗ್ರಾಮ ಸಭೆಗಳು ಅನುಮೋದಿಸಿದ ಸ್ಥಳೀಯ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ಮಾತ್ರ ಎಲ್ಲ ಕಾಮಗಾರಿಗಳು ನಡೆಯಬೇಕು.
ನರೇಗಾದಿಂದ ಹೊಸ ಕಾಯ್ದೆಗೆ ವರ್ಗಾವಣೆ ಹೇಗೆ?
2026 ಜುಲೈ 1 ರಂದು ವಿಬಿ ಜಿರಾಮ್ಜಿ ಜಾರಿಗೆ ಬಂದ ನಂತರ ನರೇಗಾ ಔಪಚಾರಿಕವಾಗಿ ರದ್ದಾಗಲಿದೆ. ಆದರೆ ಪ್ರಸ್ತುತ ನಡೆಯುತ್ತಿರುವ ಕೆಲಸಗಳಿಗೆ ಅಡಚಣೆಯಾಗದು, ಅವುಗಳನ್ನು ಹೊಸ ಚೌಕಟ್ಟಿಗೆ ವರ್ಗಾಯಿಸಲಾಗುವುದು. ಸಾರ್ವಜನಿಕ ಆಸ್ತಿಗಳ ರಿಪೇರಿ ಮತ್ತು ಅಪೂರ್ಣ ಕಾಮಗಾರಿಗಳ ಪೂರ್ಣಗೊಳಿಸುವಿಕೆಗೆ ಆದ್ಯತೆ ನೀಡಲಾಗುವುದು. ಹೊಸ ರೋಜ್ಗಾರ್ ಗ್ಯಾರಂಟಿ ಕಾರ್ಡ್ಗಳನ್ನು ನೀಡುವವರೆಗೆ, ಇ-ಕೆವೈಸಿ ಮಾಡಿದ ಕಾರ್ಮಿಕರ ಹಳೆಯ ಜಾಬ್ ಕಾರ್ಡ್ಗಳು ತಾತ್ಕಾಲಿಕವಾಗಿ ಮಾನ್ಯವಾಗಿರುತ್ತವೆ.
ಬದಲಾಗದೆ ಉಳಿಯುವ ನಿಯಮಗಳು:
· ಬೇಡಿಕೆ ಸಲ್ಲಿಸಿದ 15 ದಿನಗಳಲ್ಲಿ ಉದ್ಯೋಗ ನೀಡದಿದ್ದರೆ ನಿರುದ್ಯೋಗ ಭತ್ಯೆ.
· ವೇತನವನ್ನು ನೇರ ಲಾಭ ವರ್ಗಾವಣೆ (DBT) ಮೂಲಕ ಬ್ಯಾಂಕ್/ಪೋಸ್ಟ್ ಖಾತೆಗೆ ಪಾವತಿ.
· ಮಸ್ಟರ್ ರೋಲ್ ಮುಗಿದ 15 ದಿನಗಳೊಳಗೆ ವೇತನ ವಿತರಣೆ, ವಿಳಂಬಕ್ಕೆ ಪರಿಹಾರದ ನಿಯಮ.
ಹೊಸ ವೈಶಿಷ್ಟ್ಯಗಳು:
· ಕೆಲಸದ ಸ್ಥಳಗಳಲ್ಲಿ ಮುಖ ದೃಢೀಕರಣ (face authentication) ಆಧಾರಿತ ಹಾಜರಾತಿ ವ್ಯವಸ್ಥೆ. ಕಳಪೆ ಸಂಪರ್ಕ, ತಾಂತ್ರಿಕ ತೊಂದರೆ ಸಂದರ್ಭಗಳಲ್ಲಿ ವಿನಾಯಿತಿ ಇದೆ.
· ಬಿತ್ತನೆ ಮತ್ತು ಕೊಯ್ಲು ಅವಧಿಯಲ್ಲಿ ಕಾರ್ಮಿಕರ ಕೊರತೆ ತಪ್ಪಿಸಲು ಋತುಮಾನಗಳ ಕೆಲಸದ ಮೇಲೆ ಯಾವುದೇ ನಿರ್ಬಂಧವಿಲ್ಲ.
ಸರ್ಕಾರದ ವಾದ:
ಈ ಕಾಯ್ದೆ ಕೇವಲ ಉದ್ಯೋಗ ನೀಡದೆ, ಗ್ರಾಮೀಣ ಪ್ರದೇಶಗಳಲ್ಲಿ ಶಾಶ್ವತ ಮೂಲಸೌಕರ್ಯ ಮತ್ತು ಹವಾಮಾನ ತಡೆಯುವ ಸಾಮರ್ಥ್ಯವನ್ನು ನಿರ್ಮಿಸಿ ಸ್ವಾವಲಂಬನೆಗೆ ದಾರಿ ಮಾಡಿಕೊಡುತ್ತದೆ.
ವಿರೋಧ ಪಕ್ಷಗಳ ಆಕ್ಷೇಪಣೆಗಳು:
· ನರೇಗಾದಲ್ಲಿ ಹೆಚ್ಚಿನ ಬೇಡಿಕೆಗೆ ಕೇಂದ್ರ ಹೆಚ್ಚುವರಿ ನಿಧಿ ನೀಡಬೇಕಿತ್ತು, ಆದರೆ ಹೊಸ ಕಾಯ್ದೆಯಲ್ಲಿ ರಾಜ್ಯಗಳಿಗೆ ಸ್ಥಿರ ಹಂಚಿಕೆ ಮಾತ್ರ. ಹೆಚ್ಚುವರಿ ವೆಚ್ಚ ರಾಜ್ಯಗಳ ಹೊರೆಯಾಗಲಿದೆ.
· ಮುಖ ದೃಢೀಕರಣ ವ್ಯವಸ್ಥೆಯಿಂದ ವಯಸ್ಸಾದ ಕಾರ್ಮಿಕರನ್ನು ಹೊರಗಿಡಬಹುದು.
· ನರೇಗಾದಲ್ಲೇ ವೇತನ ಮತ್ತು ಹಣ ಬಿಡುಗಡೆ ವಿಳಂಬವಾಗುತ್ತಿರುವಾಗ, 125 ದಿನಗಳ ಕೆಲಸದಲ್ಲಿ ವ್ಯವಸ್ಥೆ ಸುಧಾರಿಸುತ್ತದೆ ಎಂಬ ಖಾತರಿ ಇಲ್ಲ.

