ಅಪರಾಧ ರಾಜಕೀಯ ಸುದ್ದಿ

ಮಹಿಳಾ ಪೊಲೀಸ್ ಅಧಿಕಾರಿಗಳು ಸೇರಿ 300-400 ಹೆಣ್ಣುಮಕ್ಕಳ ಮೇಲೆ ವಿಕೃತಿ ಮೆರೆದಿದ್ದಾರೆ: ಲಕ್ಷ್ಮೀ ಹೆಬ್ಬಾಳ್ಕರ್

Share It

ಬೆಳಗಾವಿ : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮತ್ತವರ ತಂದೆ ಶಾಸಕ ಹೆಚ್​.ಡಿ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 300-400 ಹೆಣ್ಣು ಮಕ್ಕಳ ಮೇಲೆ ವಿಕೃತಿಯನ್ನು ಮೆರೆದಿದ್ದಾರೆ.

ಎಷ್ಟು ಹೆಣ್ಣುಮಕ್ಕಳ ಜೊತೆಗೆ ಹೀಗಾಗಿದೆ ಅಂತ ಎಣಿಸಿಕೊಂಡು ಕೂಡಲು ಆಗಲ್ಲ. 16 ವರ್ಷದಿಂದ 50 ವರ್ಷದವರೆಗೆ ಮಹಿಳೆಯರಿದ್ದಾರೆ. ಇದರಲ್ಲಿ ಮನೆ ಕೆಲಸದವರು ಸೇರಿದಂತೆ ಪೊಲೀಸ್ ಅಧಿಕಾರಿಗಳು ಇದ್ದಾರೆ. ಹೆದರಿಸಿ ಬೆದರಿಸಿ ಈ ರೀತಿ ಮಾಡಿದ್ದಾರೋ ಗೊತ್ತಿಲ್ಲ. ಅವರು ವಿಕೃತ ಕಾಮಿಗಳು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಚ್​ಡಿ ರೇವಣ್ಣ ಅವರು ಮುಖ್ಯ ಆರೋಪಿ, ಪ್ರಜ್ವಲ್ ರೇವಣ್ಣ 2ನೇ ಆರೋಪಿ. ನನಗೆ ವಿದೇಶದಿಂದ ಪೋನ್ ಕರೆಗಳು ಬರುತ್ತಿವೆ. ಇಷ್ಟೆಲ್ಲ ನಡೆಯುತ್ತಿದ್ದರೂ ಬಿಜೆಪಿ ನಾಯಕರು ಇದರ ಬಗ್ಗೆ ಯಾಕೆ ತುಟಿ ಬಿಚ್ಚುತ್ತಿಲ್ಲ? ಹುಬ್ಬಳ್ಳಿಯ ಘಟನೆ ಬಗ್ಗೆ ಎಲ್ಲ ಜಿಲ್ಲೆಗಳಲ್ಲಿ ಧರಣಿ ಮಾಡಿದರು. ಧೀಮಂತ ಬಿಜೆಪಿ ನಾಯಕರಿಗೆ ಈ ಹೆಣ್ಣು ಮಕ್ಕಳು ಕಾಣಿಸುತ್ತಿಲ್ಲವಾ? ಎಂದು ಬಿಜೆಪಿ​ ವಿರುದ್ಧ ​ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದರು.

ಇವರ ಜಾಣ ಕುರುಡು ಪ್ರಕರಣ ಮುಚ್ಚಿ ಹಾಕಲು ಹೊರಟಿದೆ. ವಿಪಕ್ಷ ನಾಯಕ ಆರ್​.ಅಶೋಕ್ ಜೆಡಿಎಸ್​ನವರನ್ನ ಕೇಳಿ ಅಂತಾರೆ. ಈ ವಿಚಾರದಲ್ಲಿ ನಿಮ್ಮ ನಿಲುವೇನು? ​ರಾಜ್ಯದಲ್ಲಿ ನಡೆದ 2-3 ಘಟನೆ ಬಗ್ಗೆ ಮೋದಿ ಉಲ್ಲೇಖ ಮಾಡುತ್ತಾರೆ. ಪ್ರಧಾನಿ ಮೋದಿ ಈ ಪ್ರಕರಣದ ಬಗ್ಗೆ ಯಾಕೆ ಮಾತಾಡಲಿಲ್ಲ? ಪಕ್ಕದಲ್ಲೇ ಆ ಸಂಸದರನ್ನು ಕೂರಿಸಿಕೊಳ್ಳತ್ತೀರಿ. ಬೇಟಿ ಬಚಾಚೋ, ಬೇಟಿ ಪಡಾವೋ ಬರೀ ಘೋಷಣೆ ಅಷ್ಟೇನಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿ ಬಿಡಬೇಡಿ. ಇದು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತೆ ಹೆಣ್ಣುಮಕ್ಕಳಿಗೆ ಅಪಮಾನ ಆಗುತ್ತೆ. ಜಗದೀಶ್​ ಶೆಟ್ಟರ್ ಅವರು ಈ ಹೆಣ್ಣುಮಕ್ಕಳ ಬಗ್ಗೆ ಯಾಕೆ ಮಾತಾಡುತ್ತಿಲ್ಲ. ಯಾಕೆ ಮೌನ ವಹಿಸಿದ್ದಾರೆ? ಪ್ರಜ್ವಲ್ ರೇವಣ್ಣ ಕರ್ಮಕಾಂಡ ಕಾಣಿಸುತ್ತಿಲ್ವ. ನನ್ನ ಬಗ್ಗೆ ಹಗುರವಾಗಿ ಮಾತಾಡಿದಾಗ ಶೆಟ್ಟರ್ ಮತ್ತು ಮಂಗಲಾ ಅಂಗಡಿ ನಕ್ಕರು. ಇವತ್ತು ಸಂಜಯ್ ಪಾಟೀಲ್ ಅವರಿಗೆ ಹೆಣ್ಣುಮಕ್ಕಳ ಬಗ್ಗೆ ಮಾತಾಡುವ ಪೌರುಷ ಬರ್ತಿಲ್ಲ ಯಾಕೆ ಎಂದು ಕಿಡಿಕಾರಿದರು.

ಉಡುಪಿಯಲ್ಲಿ ವಿದ್ಯಾರ್ಥಿನಿಯರು ಶೌಚಾಲಯದಲ್ಲಿದ್ದಾಗ ವಿಡಿಯೋ ಮಾಡಿದರೂ ಅಂತ ತನಿಖೆಗೆ ವಹಿಸಿದೇವು. ರಾಷ್ಟ್ರೀಯ ಆಯೋಗದವರು ಎದ್ದು ಬಿದ್ದು ಓಡಿ ಬಂದರು. ಈಗ ಅವರೆಲ್ಲ ಎಲ್ಲಿದ್ದಾರೆ ಇದೇನಾ ಬಿಜೆಪಿ ಸಂಸ್ಕೃತಿ. ಆರ್.ಅಶೋಕ ಅವರು ಇದರ ಬಗ್ಗೆ ಮಾತಾಡದೇ ಅವರ ಪಕ್ಷದವರನ್ನು ಕೇಳಿ ಅಂತಾರೆ. ಅಶೋಕ, ವಿಜಯೇಂದ್ರ ಅವರೇ ನಿಮ್ಮ ರಾಜಕೀಯ ನಿಲುವು ಏನು? 300-400 ಹೆಣ್ಣು ಮಕ್ಕಳ ಮೇಲೆ ವಿಕೃತಿ ಮೆರೆದಿದ್ದಾರೆ. ಇದರ ಬಗ್ಗೆ ಯಾರು ತುಟಿ ಬಿಚ್ಚುತ್ತಿಲ್ಲ ಯಾಕೆ. ಜೆಡಿಎಸ್ ಜೊತೆಗೆ ಮೈತ್ರಿ ಬಿಜಪಿಯವರು ಮುಂದುವರೆಸುತ್ತಾರಾ ಅಥವಾ ಮುರಿದುಕೊಳ್ತಾರಾ ಸ್ಪಷ್ಟಪಡಿಸಲಿ ಎಂದರು.

ನಾವು ಇದರಲ್ಲಿ ರಾಜಕಾರಣ ಮಾಡುತ್ತಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿ ಧ್ವನಿ ಎತ್ತುತ್ತಿದ್ದೇನೆ‌. ಸಾಮಾಜಿಕ ಬದ್ಧತೆಯಿಂದ ಹೆಣ್ಣುಮಕ್ಕಳ ಪರವಾಗಿ ಧ್ವನಿ ಎತ್ತಬೇಕಿದೆ. ಬಿಜೆಪಿಯವರು ಪ್ರಜ್ವಲ್ ರೇವಣ್ಣ ಅವರನ್ನ ರಕ್ಷಣೆ ಮಾಡದಿದ್ದರೇ ಉನ್ನತ ತನಿಖೆ ಮಾಡಿಸಿ. ನಮಗೆ ಮಾಹಿತಿ ಬರುತ್ತಿದ್ದಂತೆ ಕೂಡಲೇ ಎಸ್‌ಐಟಿ ರಚನೆ ಮಾಡಿದ್ದೇವೆ. ತನಿಖೆ ಆಗುತ್ತೆ ಕಠಿಣ ಶಿಕ್ಷೆ ಆಗಬೇಕು ನಮ್ಮ ಸರ್ಕಾರ ಮಾಡುತ್ತೆ. ಹುಬ್ಬಳ್ಳಿಯಲ್ಲಿ ನಡೆಯಬಾರದ ಘಟನೆ ನಡೆದಿದೆ ಎಲ್ಲರೂ ಖಂಡಿಸಿದ್ದೇವೆ. ಮಂಡ್ಯದ ಸೊಸೆ ಅಂತಿದ್ದ ಸುಮಲತಾ ಅವರು ಈಗ ಎಲ್ಲಿದ್ದಾರೆ‌ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಅವರೇ ಉಪ್ಪು ತಿಂದವರು ನೀರು ಕುಡಿಬೇಕು ಅಂತ ಹೇಳಿ ನುಣುಚಿಕೊಳ್ಳಲು ಸಾಧ್ಯವಿಲ್ಲ. ಪ್ರಜ್ವಲ್ ರೇವಣ್ಣ ನನ್ನ ಮಗ ಅಂತ ಪ್ರಚಾರ ಮಾಡಿದ್ದಾರೆ. ಮಹಿಳೆ ಹೋಗಿ ಕೇಸ್ ಕೊಟ್ಟಿದ್ದು ಸುಳ್ಳಾ. ಇದರ ಬಗ್ಗೆ ಬಿಜೆಪಿಯವರು ಎನು ಹೇಳುತ್ತಾರೆ. ಪ್ರಕರಣದ ಬಗ್ಗೆ ಸಿಎಂ ಅವರ ಜೊತೆಗೆ ನಾನು ಮಾತಾಡಿದ್ದೇನೆ. ಇಬ್ಬರು ಮಹಿಳಾ ಅಧಿಕಾರಿಗಳು ತನಿಖಾ ತಂಡದಲ್ಲಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಎನು ಮಾಡಬೇಕು ಅದನ್ನು ಮಾಡುತ್ತೇವೆ. ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಹೋಗಿದ್ದಾರೆ‌. ಮಂಗಳಾ ಅಂಗಡಿಯವರು ಈ ವಿಚಾರ ಖಂಡಿಸಬೇಕು. ಸಾವಿರಾರು ಜನರನ್ನ ಕರೆದುಕೊಂಡು ಹೋರಾಟ ಮಾಡಲಿ ಎಂದು ಆಗ್ರಹಿಸಿದರು.


Share It

You cannot copy content of this page