ಪಾವಗಡ: ಪ್ರಕರಣವೊಂದರಲ್ಲಿ ಸುಳ್ಳು ಸಾಕ್ಷಿ ಹೇಳಿದ್ದ ಪತ್ರಬರಹಗಾರನೊಬ್ಬನಿಗೆ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದ್ದು, ಆ ಪ್ರಕರಣದಲ್ಲಿ 31 ಸಾವಿರ ರು.ಗಳ ವಂಚನೆಯಾಗಿದೆ ಎಂದು ವಿಚಾರಣೆ ನಡೆದಿತ್ತು. ಇದಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ತಯಾರಿಸಿಕೊಟ್ಟಿದ್ದ ಆಧಾರದ ಮೇಲೆ ಸುಬ್ಬರಾಯಪ್ಪ ಎಂಬ ಪತ್ರ ಬರಹಗಾರನನ್ನು ಸಾಕ್ಷಿಯನ್ನಾಗಿಸಲಾಗಿತ್ತು.
ಸುಬ್ಬರಾಯಪ್ಪ ಪ್ರಕರಣದಲ್ಲಿ ಸಾಕ್ಷಿಯಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆದರೆ, ಆತ ಸುಳ್ಳು ಸಾಕ್ಷಿ ಹೇಳುತ್ತಿದ್ದಾನೆ ಎಂಬುದು ವಿಚಾರಣೆ ವೇಳೆ ಗೊತ್ತಾಗಿತ್ತು. ಪ್ರಕರಣದಲ್ಲಿ ಯಾವುದೇ ಉರುಳಿಲ್ಲ ಎಂದು ನ್ಯಾಯಾಲಯ ಪ್ರಕರಣವನ್ನು ಕೈಬಿಟ್ಟಿತು. ಆದರೆ, ಪ್ರಕರಣದಲ್ಲಿ ಪತ್ರ ಬರಹಗಾರ ಸುಳ್ಳು ಸಾಕ್ಷಿ ನುಡಿದಿದ್ದರ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಲಾಗಿತ್ತು.
ಇದೀಗ ಪಾವಗಡ ನ್ಯಾಯಾಲಯ ಸುಬ್ಬರಾಯಪ್ಪನಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ಹತ್ತು ಸಾವಿರ ದಂಡ ವಿಧಿಸಿ ಆದೇಶಿಸಿದೆ. ಸರಕಾರಿ ವಕೀಲರಾದ ಸಣ್ಣೀರಪ್ಪ ಪ್ರಕರಣದ ಸುಳ್ಳು ಸಾಕ್ಷಿಗೆ ಶಿಕ್ಷೆ ನೀಡುವಂತೆ ನ್ಯಾಯಾಲಯದಲ್ಲಿ ವಾದಿಸಿದ್ದರು.