2 ನೇ ಏರ್ ಪೋರ್ಟ್ ಭಾಗ್ಯ: ಪರಂ ತವರು ತುಮಕೂರಿಗಾ? ಡಿಕೆಶಿ ತವರು ರಾಮನಗರಕ್ಕಾ?
ಬೆಂಗಳೂರು: ರಾಜ್ಯದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳಗಳ ಅಂತಿಮಗೊಳಿಸುವ ಕಾರ್ಯ ನಡೆದಿದ್ದು, ತುಮಕೂರು ಮತ್ತು ರಾಮನಗರ ಜಿಲ್ಲೆಗಳ ನಡುವೆ ಪೈಪೋಟಿ ಏರ್ಪಟ್ಟಿದೆ.
ಕೊರಟಗೆರೆ ಪ್ರತಿನಿಧಿಸುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತುಮಕೂರು ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಾಗ ಅಂತಿಮಗೊಳಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಈ ನಡುವೆ ಡಿಸಿಎಂ ಡಿ.ಕೆ.ಶಿವಕುಮಾರ್, ತಮ್ಮ ತವರು ಜಿಲ್ಲೆ ರಾಮನಗರ ಜಿಲ್ಲೆಗೆ ವಿಮಾನ ನಿಲ್ದಾಣ ಕೊಂಡೊಯ್ಯುವ ತಯಾರಿಯಲ್ಲಿದ್ದಾರೆ.
ತುಮಕೂರಿನ ಕುಣಿಗಲ್, ದಾಬಸ್ ಪೇಟೆ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣದ ಜಾಗ ಗುರುತಿಸಲು ಪರಮೇಶ್ವರ್ ಒತ್ತಡ ಹಾಕುತ್ತಿದ್ದು, ರಾಮನಗರ ಜಿಲ್ಲೆಯ ಹಾರೋಹಳ್ಳಿ ಅಥವಾ ಬಿಡದಿಯಲ್ಲಿ ಜಾಗ ಗುರುತಿಸಲು ಡಿಕೆಶಿ ಒತ್ತಡ ಹಾಕುತ್ತಿದ್ದಾರೆ. ಈ ನಡುವೆ ಬೆಂಗಳೂರಿನ ಹೊರವಲಯದ ಹೆಮ್ಮಿಗೆಪುರದ ಬಳಿ ಜಾಗ ಗುರುತಿಸುವ ಪ್ರಯತ್ನವೂ ನಡೆದಿದೆ ಎನ್ನಲಾಗಿದೆ.
ರಾಜಧಾನಿ ಬೆಂಗಳೂರಿನ ಉತ್ತರದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿದ್ದು ಮತ್ತೊಂದು ನಿಲ್ದಾಣವನ್ನು ದಕ್ಷಿಣದಲ್ಲಿ ಆರಂಭಿಸಬೇಕು ಎಂಬ ತಯಾರಿಯಲ್ಲಿ ರಾಜ್ಯ ಸರಕಾರವಿದೆ. ಹೀಗಾಗಿ, ರಾಮನಗರ ಜಿಲ್ಲೆ ಉತ್ತಮ ಆಯ್ಕೆ ಎಂಬ ಮಾತಿದೆ.
ಹೊಸೂರು ವಿಮಾನ ನಿಲ್ದಾಣಕ್ಕೆ ಕೌಂಟರ್ : ಈ ನಡುವೆ ತಮಿಳುನಾಡು ಸರಕಾರ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಿಸಲು ಮುಂದಾಗಿದೆ. ಇದು ಕಾರ್ಯಾರಂಭ ಮಾಡಿದ್ದೇ ಆದರೆ, ರಾಜಧಾನಿ ಬೆಂಗಳೂರಿನ ವಿಮಾನ ನಿಲ್ದಾಣದ ಮೇಲಿನ ಒತ್ತಡ ಕಡಿಮೆಯಾಗಲಿದೆ. ಇದರಿಂದ ರಾಜ್ಯ ಸರಕಾರಕ್ಕೆ ಹಿನ್ನಡೆಯಾಗಲಿದೆ. ಹೀಗಾಗಿ, ಎರಡನೇ ವಿಮಾನ ನಿಲ್ದಾಣ ರಾಜ್ಯದಲ್ಲಿ ಆದಷ್ಟು ಬೇಗ ನಿರ್ಮಾಣವಾಗಬೇಕಿದೆ.
ಜಾಗ ಅಂತಿಮಗೊಳಿಸಿವುದು ವಿಳಂಬ ಆಗಿದ್ಧೇಕೆ? ಈ ನಡುವೆ ರಾಜ್ಯ ಸರಕಾರ ವಿಮಾನ ನಿಲ್ದಾಣ ಕ್ಕೆ ಏಳು ಸ್ಥಳಗಳನ್ನು ಗುರುತಿಸಿತ್ತು. ಇದೀಗ ಮೂರು ಜಾಗಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಉಪಚುನಾವಣೆ ಮತ್ತು ಮಹಾರಾಷ್ಟ್ರ ಚುನಾವಣೆಯಲ್ಲಿ ರಾಜ್ಯದ ಬಹುತೇಕ ಸಚಿವರು ಬ್ಯುಸಿಯಾಗಿದ್ದ ಕಾರಣದಿಂದ ಜಾಗದ ಆಯ್ಕೆ ಪ್ರಕ್ರಿಯೆ ತಡವಾಗಿತ್ತು. ಇದೀಗ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶೊ ಹಾಗೂ ಎಂ.ಬಿ. ಪಾಟೀಲ್ ವಾಪಸ್ಸಾಗಿದ್ದು, ಶೀಘ್ರದಲ್ಲೇ ಜಾಗದ ಅಂತಿಮ ಆಯ್ಕೆ ನಡೆಯಲಿದೆ.