ಉಪಯುಕ್ತ ಸುದ್ದಿ

ಕನ್ನಡ ಭಾಷಾ ಶಿಕ್ಷಕರ ನೇಮಕಾತಿಗೆ ಆದ್ಯತೆ ನೀಡಿಆಂಗ್ಲಭಾಷಾ ಪ್ರೌಢಿಮೆ ಪರೀಕ್ಷೆ ಕೈಬಿಡಿ- ಬಿಳಿಮಲೆ

Share It

ಶಾಲಾ ಶಿಕ್ಷಣ ಇಲಾಖೆಯು ಆರಂಭಿಸಿರುವ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಕನ್ನಡ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಟ್ಟಿರುವುದು ಮತ್ತು ವಿವಿಧ ವಿಷಯಗಳ ಶಿಕ್ಷಕರ ನೇಮಕಾತಿಗೆ ಆಂಗ್ಲಭಾಷಾ ಪ್ರೌಢಿಮೆಯ ಪರೀಕ್ಷೆಯನ್ನು ಕಡ್ಡಾಯಗೊಳಿಸಿರುವುದು ಕನ್ನಡ ಭಾಷೆಗೆ ಮತ್ತು ರಾಜ್ಯದ ಭಾಷಾನೀತಿಗೆ ಗಂಭೀರ ಧಕ್ಕೆಯುಂಟು ಮಾಡುವ ಕ್ರಮವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಈ ಕುರಿತಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರಿಗೆ ಪತ್ರ ಬರೆದಿರುವ ಬಿಳಿಮಲೆ, ಇಲಾಖೆಯ ಈ ಕ್ರಮ ರಾಜ್ಯದ ಸರ್ಕಾರಿ ಶಾಲೆಗಳನ್ನು ಹಂತ ಹಂತವಾಗಿ ಆಂಗ್ಲ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸುವ ದಿಕ್ಕಿನ ಸ್ಪಷ್ಟ ಸೂಚನೆಯಾಗಿದ್ದು, ಇದು ಗ್ರಾಮೀಣ ಪ್ರದೇಶದ ಹಾಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಸಾವಿರಾರು ಪ್ರತಿಭಾವಂತ ಅಭ್ಯರ್ಥಿಗಳಿಗೆ ಸಮಾನ ಅವಕಾಶದ ತತ್ತ್ವವನ್ನು ನಿರಾಕರಿಸುವ ಪ್ರಕ್ರಿಯೆಯಾಗಿದೆ. ತಾವು ಈ ಕೂಡಲೇ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿ ಇಲಾಖೆಯ ಕನ್ನಡ ವಿರೋಧಿಕ್ರಮಕ್ಕೆ ತಡೆ ನೀಡಬೇಕೆಂದು ಆಗ್ರಹಿಸಿದ್ದಾರೆ. 

ವಿಶ್ವದಾದ್ಯಂತ ನಡೆದಿರುವ ನಡೆದಿರುವ ಶಿಕ್ಷಣ ಸಂಶೋಧನೆಗಳು ಮಗುವಿನ ಬೌದ್ಧಿಕ ಬೆಳವಣಿಗೆ, ಸೃಜನಶೀಲತೆ ಮತ್ತು ಕಲಿಕೆಯ ಗುಣಮಟ್ಟಕ್ಕೆ ಮಾತೃಭಾಷೆಯೇ ಅತ್ಯುತ್ತಮ ಮಾಧ್ಯಮ ಎಂಬುದನ್ನು ಪುನರುಚ್ಛರಿಸಿವೆ ಎನ್ನುವುದನ್ನು ಸ್ಮರಿಸಿರುವ ಬಿಳಿಮಲೆ, ಇಂತಹ ಸಂದರ್ಭದಲ್ಲಿ ಮಾತೃಭಾಷೆಯ ಸ್ಥಾನವನ್ನು ದುರ್ಬಲಗೊಳಿಸುವ ಯಾವುದೇ ನೀತಿ ಕನ್ನಡದ ಭವಿಷ್ಯಕ್ಕೆ ಮಾರಕವಾಗುತ್ತದೆ. ಇದರ ಪರಿಣಾಮವಾಗಿ ಮುಂದಿನ ಪೀಳಿಗೆಗೆ ಕನ್ನಡದೊಂದಿಗೆ ಹೊಂದಿರುವ ಭಾವನಾತ್ಮಕವಾದ, ಸಾಂಸ್ಕೃತಿಕವಾದ ಮತ್ತು ಜ್ಞಾನಾತ್ಮಕವಾದ ಸಂಬಂಧವೂ ಕ್ಷೀಣಿಸುವ ಅಪಾಯ ಎದುರಾಗುತ್ತದೆ ಎಂದಿದ್ದಾರೆ.

ಸರ್ಕಾರವು ಶಿಕ್ಷಕರ ನೇಮಕಾತಿಯಲ್ಲಿ ಕನ್ನಡ ಶಿಕ್ಷಕರ ಹುದ್ದೆಗಳಿಗೆ ಅವಕಾಶ ಕಲ್ಪಿಸಬೇಕು, ವಿವಿಧ ವಿಷಯಗಳ ಶಿಕ್ಷಕರ ನೇಮಕಾತಿಗೆ  ವಿಧಿಸಿರುವ ಆಂಗ್ಲಭಾಷಾ ಪ್ರೌಢಿಮೆ ಪರೀಕ್ಷೆಯನ್ನು ಹಿಂಪಡೆಯಬೇಕು ಎಂದಿರುವ ಬಿಳಿಮಲೆ, ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಸಲ್ಲಬೇಕಾದ ಸಂವಿಧಾನಬದ್ಧ ಮತ್ತು ನಾಡಿನ ಆಶಯಕ್ಕೆ ತಕ್ಕ ಪ್ರಾಮುಖ್ಯತೆಯನ್ನು ಕಾಪಾಡುವಲ್ಲಿ ಸರ್ಕಾರವು ದೃಢ ನಿಲುವನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕನ್ನಡದ ಅಸ್ತಿತ್ವ, ಸರ್ಕಾರಿ ಶಾಲೆಗಳ ಸ್ವರೂಪ ಹಾಗೂ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಸರ್ಕಾರ ಈ ವಿಷಯದಲ್ಲಿ ತ್ವರಿತಕ್ರಮವನ್ನು ಜರುಗಿಸುತ್ತದೆ ಎಂಬ ವಿಶ್ವಾಸವನ್ನು ಸಹ ತಾವು ಹೊಂದಿರುವುದಾಗಿ ಬಿಳಿಮಲೆ ಹೇಳಿದ್ದಾರೆ.


Share It

You cannot copy content of this page