ರಾಜಕೀಯ ಸುದ್ದಿ

ವಿಧಾನಮಂಡಲ ಅಧಿವೇಶನ: ರಾಜ್ಯಪಾಲರ ಭಾಷಣದಲ್ಲಿ ಮೈಕ್ರೋಫೈನಾನ್ಸ್ ಸುಗ್ರೀವಾಜ್ಞೆಗೆ ಒತ್ತು

Share It

ಬೆಂಗಳೂರು: ಸಾಲ ವಸೂಲಾತಿಯಲ್ಲಿ ಕಿರುಕುಳ, ಹಿಂಸೆ ಘಟನೆ ಬೆಳಕಿಗೆ ಬಂದಿದೆ. ಇದನ್ನು ತಡೆಯಲು ಸುಗ್ರೀವಾಜ್ಞೆಯನ್ನು ಸರ್ಕಾರ ತಂದಿದೆ. ಕನಿಷ್ಠ 6 ತಿಂಗಳಿನಿಂದ ಗರಿಷ್ಠ 10 ವರ್ಷಗಳವರೆಗೆ ಶಿಕ್ಷೆ ಹಾಗೂ 5 ಲಕ್ಷ ರೂ. ದಂಡ ವಿಧಿಸುವ ಸುಗ್ರೀವಾಜ್ಞೆ ಜಾರಿಗೆ ತರಲಾಗಿದೆ. ಕಿರು ಸಾಲ ವಸೂಲಾತಿ ಕಿರುಕುಳ ತಡೆಯಲು ಶಾಸನಾತ್ಮಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯಪಾಲ ಥಾವರ್ ​ಚಂದ್ ಗೆಹ್ಲೋಟ್ ಹೇಳಿದ್ದಾರೆ.

ವಿಧಾನಮಂಡಲ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ 19 ತಿಂಗಳಲ್ಲಿ ಗಂಭೀರ ಕಾನೂನು ಸುವ್ಯವಸ್ಥೆ ಸಮಸ್ಯೆ ಉದ್ಭವಿಸಿಲ್ಲ. ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿ ಕೆಲಸ ಮಾಡುತ್ತಿವೆ. ಪೊಲೀಸರು ಅಪರಾಧಿಗಳನ್ನು ಶೀಘ್ರ ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅಪರಾಧ ಪ್ರಕರಣಗಳು ಇಳಿಕೆ ಕಾಣುತ್ತಿದೆ ಎಂದರು.

ಸರ್ಕಾರ ವೇಗದ ಗತಿಯಲ್ಲಿ ಅಭಿವೃದ್ಧಿ ಕೆಲಸ ಮಾಡ್ತಿದೆ. ರಾಜ್ಯದ ಆಯವ್ಯಯ ವೃದ್ಧಿಯಾಗುತ್ತಿದೆ. ರಾಜ್ಯದಲ್ಲಿ ಉತ್ತಮ ಮಳೆ ಆಗಿದ್ದರಿಂದ ಉತ್ತಮ ಫಸಲು ಬಂದಿದೆ. ರಾಜ್ಯಸರ್ಕಾರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಗ್ಯಾರಂಟಿಯಿಂದ ರಾಜ್ಯ ದಿವಾಳಿ ಆಗುತ್ತೆ ಎಂದು ಹೇಳುತ್ತಿದ್ದರು. ಆದರೆ ಈ ಎಲ್ಲಾ ಆರೋಪಗಳು ಸುಳ್ಳು ಎಂದು ರಾಜ್ಯಸರ್ಕಾರ ಸಾಬೀತು ಮಾಡಿದೆ. ರಾಜ್ಯಸರ್ಕಾರ ಕಟ್ಟಕಡೆಯ ವ್ಯಕ್ತಿಗೂ ಯೋಜನೆಯನ್ನು ತಲುಪಿಸಿದೆ. ಜಿಎಸ್​ಟಿ ಸಂಗ್ರಹದಲ್ಲೂ ರಾಜ್ಯಸರ್ಕಾರ ಮುಂಚೂಣಿಯಲ್ಲಿದೆ. ಕೆಎಂಎಫ್​ನಿಂದ ಅತಿ ಹೆಚ್ಚು ಹಾಲು ಸಂಗ್ರಹವಾಗುತ್ತಿದೆ ಎಂದು ತಿಳಿಸಿದರು.

ಮೂಲಸೌಕರ್ಯ ಒದಗಿಸುವುದರಲ್ಲೂ ಕರ್ನಾಟಕ ಮುಂಚೂಣಿಯಲ್ಲಿದೆ. ಗ್ಯಾರಂಟಿ ಯೋಜನೆಗಳ ಜಾರಿಯಿಂದ ಜನರಿಗೆ ಅನುಕೂಲವಾಗಿದೆ. ರೈತರ ಪಂಪ್​ಸೆಟ್​ಗಳಿಗೆ ಉಚಿತ ವಿದ್ಯುತ್​ ವ್ಯವಸ್ಥೆ ನೀಡಲಾಗಿದೆ. ಬಜೆಟ್​ನಲ್ಲಿ ಶೇ.15.01ರಷ್ಟು ಸಂಪತ್ತು ಬಂಡವಾಳ ವೆಚ್ಚಕ್ಕೆ ವಿನಿಯೋಗ ಮಾಡಲಾಗುತ್ತದೆ. ಇದು ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ರಾಜ್ಯಗಳು ಸೇರಿದಂತೆ ಹಲವು ಅಭಿವೃದ್ಧಿಶೀಲ ರಾಜ್ಯಗಳಿಗಿಂತ ಹೆಚ್ಚಿನದ್ದಾಗಿದೆ ಎಂದರು.

ಬೆಂಗಳೂರು ಫೆರಿಫೆರಲ್ ರಿಂಗ್ ರೋಡ್ ಮೊದಲ ಹಂತದ ಯೋಜನೆಗೆ ಹುಡ್ಕೋ ಸಂಸ್ಥೆಯಿಂದ ಸಾಲದ ರೂಪದಲ್ಲಿ 27,000 ಕೋಟಿ ರೂ. ಹಣವನ್ನು ಸಾಲದ ರೂಪದಲ್ಲಿ ಪಡೆಯಲು ನಿರ್ಧರಿಸಲಾಗಿದೆ. 2565 ಎಕರೆ ಭೂಪ್ರದೇಶದಲ್ಲಿ ಕಾಮಗಾರಿ ಕೈಗೊಳ್ಳಲು ತೀರ್ಮಾನಿಸಲಾಗಿದೆ. 73 ಕಿ.ಮೀ. ಉದ್ದದ ಫೆರಿಫೆರಲ್ ರಿಂಗ್ ರೋಡ್ ನಿರ್ಮಾಣ ಆಗಲಿದೆ ಎಂದು ಹೇಳಿದರು.

ಗೃಹಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳಿಗೆ ಇದುವರೆಗೆ 36 ಸಾವಿರ ಕೋಟಿ ರೂ. ಜಮೆಯಾಗಿದೆ. ಗೃಹಲಕ್ಷ್ಮೀ ಯೋಜನೆಗೆ 1,26,24,547 ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಹಿಂದೆ ಕೇಂದ್ರದ ಸಂಸ್ಥೆಗಳು ಅಕ್ಕಿ ಕೊಡಲ್ಲ ಎಂದು ತಿಳಿಸಿದ್ದವು. ಹೀಗಾಗಿ ಹಣ ವರ್ಗಾವಣೆ ವ್ಯವಸ್ಥೆ ತಂದಿದ್ದೇವೆ. ಈಗ ಭಾರತೀಯ ಆಹಾರ ನಿಗಮ ಅಕ್ಕಿ ಕೊಡಲು ಮುಂದಾಗಿದೆ, ತಲಾ 10 ಕೆಜಿ ಆಹಾರ ಧಾನ್ಯ ನೀಡಲು ಪ್ರಾರಂಭಿಸಿದ್ದೇವೆ. ಗೃಹಜ್ಯೋತಿ ಯೋಜನೆಯ 17,290 ಕೋಟಿ ಹಣ ವಿದ್ಯುತ್ ಸರಬರಾಜು ಕಂಪನಿಗಳಿಗೆ ಹಣ ಬಿಡುಗಡೆ ಆಗಿದೆ ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.


Share It

You cannot copy content of this page