ಮಹಿಳೆಯೊಬ್ಬರ ಬಟ್ಟೆ ಬಿಚ್ಚಿ ಜೀವಂತ ಸಮಾಧಿ: ಆಕೆ ಸಮಾಧಿಯಿಂದ ಎದ್ದು ಬಂದಿದ್ದು ಪವಾಡ
ಚಿಕ್ಕಬಳ್ಳಾಪುರ: ಶಿಕ್ಷಕಿಯೊಬ್ಬರನ್ನು ಅಪಹರಣ ಮಾಡಿ, ಬಟ್ಟೆ ಬಿಚ್ಚಿ ಆಕೆಯನ್ನು ಜೀವಂತ ಸಮಾಧಿ ಮಾಡಿದ್ದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಓರ್ವ ಅಪ್ರಾಪ್ತ ಆರೋಪಿ ಸೇರಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಓರ್ವ ಮಹಿಳೆಯೂ ಸೇರಿದ್ದಾರೆ.
ಬಿಂದು ಎಂಬ ಪ್ರಕರಣದ ಮೊದಲ ಆರೋಪಿ ತನ್ನ ಪತಿ ಸಂತೋಷ್ ಕುಮಾರ್, ಶಿಕ್ಷಕಿಯೊಂದಿಗೆ ಸಲುಗೆಯಿಂದಿದ್ದಾನೆ ಎಂದು ಅನುಮಾನಪಟ್ಟು, ಆಕೆಯನ್ನು ಕೊಲ್ಲಲು ಸುಫಾರಿ ಕೊಟ್ಟಿದ್ದಳು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆಂದ್ರ ಮೂಲದ ಸತೀಶ್ ರೆಡ್ಡಿ, ರಮಣ, ನಾಗೇಂದ್ರ ಹಾಗೂ ರಾಯಚೂರು ಮೂಲದ ರವೀಚಂದ್ರ ಹಾಗೂ ಒಬ್ಬ ಅಪ್ರಾಪ್ತ ಆಕೆಯ ಕೊಲೆಗೆ ಸಂಚು ರೂಪಿಸಿದ್ದರು.
ಮೊದಲಿಗೆ ಯೋಗ ಕಲಿಯುವ ನೆಪದಲ್ಲಿ ಶಿಕ್ಷಕಿಯ ಜತೆ ಸಲುಗೆ ಬೆಳೆಸಿದ ಸತೀಶ್ ರೆಡ್ಡಿ, ಅ.23 ರಂದು ಮಾರ್ಷಲ್ ಆರ್ಟ್ ತರಬೇತಿಗೆಂದು ಆಕೆಯನ್ನು ಕಾರಿಗೆ ಹತ್ತಿಸಿಕೊಂಡಿದ್ದಾನೆ. ಅನಂತರ ಉಳಿದ ಆರೋಪಿಗಳು ಕಾರಿಗೆ ಹತ್ತಿಕೊಂಡು ಆಕೆಯ ಬಾಯಿಗರ ಬಟ್ಟೆಯನ್ನು ಸುತ್ತಿ, ನಂತರ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದಿದ್ದಾರೆ.
ಶಿಡ್ಲಘಟ್ಟ ಸಮೀಪದ ಕಾಡಿಗೆ ತೆಗೆದುಕೊಂಡು ಹೋಗಿ, ಆಕೆಯನ್ನು ಅರೆಬೆತ್ತಲೆಗೊಳಿಸಿ, ಆಕೆಗೆ ಹಿಂಸೆ ನೀಡಿ ನಂತರ ಕೇಬಲ್ ವೈರ್ ನಿಂದ ಆಕೆಯ ಕುತ್ತಿಗೆಗೆ ಬಿಗಿದಿದ್ದಾರೆ. ಆಕೆ ಉಸಿರುಗಟ್ಟಿ ಕೆಳಗೆ ಬೀಳುತ್ತಿದ್ದಂತೆ, ಅಲ್ಲಿಯೇ ಒಂದು ಗುಂಡಿ ತೋಡಿ ಆಕೆಯನ್ನು ಅದರಲ್ಲಿ ಹಾಕಿ ಮುಚ್ಚಿ ಪರಾರಿಯಾಗಿದ್ದಾರೆ.
ಯೋಗ ಶಿಕ್ಷಕಿ ಬದುಕಿದ್ದೇಗೆ? : ಮಣ್ಣಿನಲ್ಲಿ ಮುಚ್ಚಿದ್ದರೂ, ಯೋಗ ಶಿಕ್ಷಕಿ ತಮಗೆ ಗೊತ್ತಿದ್ದ ಯೋಗ ಮತ್ತು ಪ್ರಾಣಾಯಾಮದ ಸಹಾಯದಿಂದ ಬದುಕಿ ವಾಪಸ್ ಬಂದಿದ್ದಾರೆ. ಗುಂಡಿಯಲ್ಲಿ ಹಾಕಿದ್ದ ಮಣ್ಣನ್ನು ತೆರವುಗೊಳಿಸಿ, ಸುಮಾರು ಕಿ.ಮೀ ಗಟ್ಟಲೇ ಅರಬೆತ್ತಲೆಯಾಗಿ ನಡೆದು ಬಂದು, ನಂತರ ಸ್ಥಳೀಯರ ಬಳಿ ವಿಷಯ ತಿಳಿಸಿದ್ದಾರೆ.
ಕೆಲವರು ಆಕೆಗೆ ಬಟ್ಟೆ ನೀಡಿ ಸಹಾಯ ಮಾಡಿದ್ದ ಅಲ್ಲಿಂದ ನೇರವಾಗಿ ಆಕೆ ಶಿಡ್ಲಘಟ್ಟ ಸರಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಿದ್ದು, ಅವರ ದೂರಿನ ಅನ್ವಯ ಪೊಲೀಸರು ತನಿಖೆ ಕೈಗೊಂಡಿದ್ದರು. ಆಗ ಒಂದೊಂದಾಗಿ ಸತ್ಯ ಹೊರಬಂದಿದ್ದು, ಎಲ್ಲ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.