ರೈಲ್ವೆ ಇಲಾಖೆಗೆ ವಂಚನೆ: ಮೂವರು ಅಧಿಕಾರಿಗಳಿಗೆ ಜೈಲುಶಿಕ್ಷೆ
ಬೆಂಗಳೂರು: ರೈಲ್ವೆ ಇಲಾಖೆಗೆ ವಂಚನೆ ಮಾಡಿ ನಷ್ಟ ಮಾಡಿದ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯ ಮೂವರು ಅಧಿಕಾರಿಗಳಿಗೆ 2,35,000 ರೂ. ದಂಡದೊಂದಿಗೆ 4 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿ ಸಿಬಿಐ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ.
ದಕ್ಷಿಣ-ಪಶ್ಚಿಮ ರೈಲ್ವೆಯ ರವಾನೆ ವಿಭಾಗದ ಅಧೀಕ್ಷಕ ಎಂ. ನಾಗರಾಜ್, ಪರ್ಸನಲ್ ಬ್ರಾಂಚ್ ಕ್ಲರ್ಕ್ ಶಾದಾಬ್ ಖಾನ್ ಮತ್ತು ನಿವೃತ್ತ ಅಕೌಂಟ್ಸ್ ಅಸಿಸ್ಟೆಂಟ್ ಆಗಿದ್ದ ಪದ್ಮಿನಿ ಶಿಕ್ಷೆಗೊಳಗಾದವರು.
ಪ್ರಕರಣದ ತನಿಖೆ ಪೂರ್ಣಗೊಂಡ ನಂತರ ಆರೋಪಿಗಳ ವಿರುದ್ಧ ಸಿಬಿಐ ಅಧಿಕಾರಿಗಳು 2016 ನವೆಂಬರ್ 21 ರಂದು ಚಾರ್ಜ್ಶೀಟ್ ಸಲ್ಲಿಸಿದ್ದರು. ಶುಕ್ರವಾರ ವಿಚಾರಣೆ ಕೈಗೆತ್ತಿಕೊಂಡ ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು ಮತ್ತು ಸಿಬಿಐ ವಿಶೇಷ ನ್ಯಾಯಾಧೀಶರು ವಿಚಾರಣೆ ನಡೆಸಿ, ಆರೋಪಿಗಳು ತಪ್ಪಿತಸ್ಥರೆಂದು ಕಂಡುಬಂದ ಹಿನ್ನೆಲೆ ಅದಕ್ಕೆ ಅನುಗುಣವಾಗಿ ಅವರಿಗೆ ಶಿಕ್ಷೆ ವಿಧಿಸಿದ್ದಾರೆ.
ಪೆನುಕೊಂಡದ ಇಂಜಿನಿಯರ್ ಕಚೇರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ವಂಚನೆ ಮಾಡಿದ್ದ ಅಧಿಕಾರಿಗಳು ರೈಲ್ವೆ ಇಲಾಖೆಗೆ ನಷ್ಟವನ್ನುಂಟು ಮಾಡುವ ಸಂಚು ರೂಪಿಸಿದ್ದರು ಎಂಬ ಆರೋಪದ ಮೇಲೆ ಸಿಬಿಐನಲ್ಲಿ 2016 ಏಪ್ರಿಲ್ 27 ರಂದು ಬೆಂಗಳೂರಿನ ನೈಋತ್ಯ ರೈಲ್ವೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದಲ್ಲಿ ಅವರು ಯಾವುದೇ ಬಿಲ್, ರಸೀದಿ ಮತ್ತು ಅರ್ಜಿಗಳನ್ನು ಎಡಿಟ್ ಲಿಸ್ಟ್ ಮತ್ತು ಸಂಬಳ ಬಿಲ್ ಗಳಲ್ಲಿ ಸೇರಿಸದೆ, ಸದರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ 16 ಉದ್ಯೋಗಿಗಳ ಹೆಸರುಗಳ ವಿರುದ್ಧ ಬೋಧನಾ ಶುಲ್ಕ ಮತ್ತು ಹಾಸ್ಟೆಲ್ ಸಬ್ಸಿಡಿ ಮರುಪಾವತಿಯಲ್ಲಿ ವಂಚಿಸಲಾಗಿದೆ. ಆ ಮೂಲಕ ಆರೋಪಿಗಳು ಅಕ್ರಮವಾಗಿ ನೈಋತ್ಯ ರೈಲ್ವೆ ಇಲಾಖೆಗೆ 18 ಲಕ್ಷ ರೂ. ಮೋಸ ಮಾಡಿದ್ದರು.