ಮೈಸೂರು: KSRTC ಕ್ಯಾಶ್ ಲೆಸ್ ಟಿಕೆಟ್ ಖರೀದಿಯ ಕಡೆಗೆ ಮುಖ ಮಾಡಿದ್ದು, ಇನ್ಮುಂದೆ UPI ಮೂಲಕ ಟಿಕೆಟ್ ಖರೀದಿಗೆ ಅವಕಾಶ ಮಾಡಿಕೊಟ್ಟಿದೆ.
ಬೆಂಗಳೂರು, ಮೈಸೂರು ಮತ್ತು ಮಡಿಕೇರಿ ನಡುವಿನ ಬಸ್ ಗಳಲ್ಲಿ ಈ ಪ್ರಾಯೋಗಿಕ ಪೇಮೆಂಟ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಈಗ ಟಿಕೆಟ್‌ಗಾಗಿ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಬಳಸಬಹುದು.
ಮೈಸೂರು ನಗರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ 524 ಸಿಟಿ ಬಸ್‌ಗಳಲ್ಲಿ ಕೂಡ ಯುಪಿಐ ಮೂಲಕ ಪಾವತಿ ಮಾಡಿ ಟಿಕೆಟ್ ಪಡೆಯಬಹುದು. ಇದು ಪ್ರಯಾಣಿಕರಿಗೆ ನಗದು ಕೊಂಡೊಯ್ಯದೆ ಮೈಸೂರು ನಗರ ದರ್ಶನಕ್ಕೆ ಅವಕಾಶ ಸಿಕ್ಕಂತಾಗಿದೆ.
KSRTC ಡೈನಾಮಿಕ್ QR ಕೋಡ್ ವ್ಯವಸ್ಥೆ ಅಳವಡಿಸಿಕೊಂಡಿದೆ ಮತ್ತು ಪ್ರಯಾಣಿಕರ ಪಾವತಿ ಯಶಸ್ವಿಯಾದರೆ ಮಾತ್ರ ಟಿಕೆಟ್ ಮುದ್ರಿಸಲಾಗುತ್ತದೆ. ಈ ಉಪಕ್ರಮವು ಪ್ರಯಾಣಿಕರಿಗೆ ತಡೆರಹಿತ ಪಾವತಿಗಳನ್ನು ಖಾತ್ರಿಗೊಳಿಸುತ್ತದೆ, UPI ವಹಿವಾಟಿನ ಮೇಲೆ ಹೆಚ್ಚು ಅವಲಂಬಿತವಾಗಿರುವ ಪ್ರಯಾಣಿಕರಿಗೆ ಪ್ರಯೋಜನವನ್ನು ನೀಡುತ್ತದೆ.
ಮೈಸೂರು ಅರಮನೆ ಮತ್ತು ಮೈಸೂರು ಮೃಗಾಲಯ ಸೇರಿ ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಯುಪಿಐ ಆಧಾರಿತ ಟಿಕೆಟ್ ವ್ಯವಸ್ಥೆ ಜಾರಿಗೊಂಡಿದೆ. ಹೀಗಾಗಿ, ಬಸ್ ಗಳಲ್ಲಿಯೂ UPI ಪಾವತಿಯ ನಿರೀಕ್ಷೆ ಪ್ರಯಾಣಿಕರಿಗಿದೆ. KSRTC ಸಿಬ್ಬಂದಿ ಪ್ರಕಾರ, ಪ್ರೀಮಿಯಂ ಫ್ಲೀಟ್‌ಗಳಲ್ಲಿ ಪ್ರಯಾಣಿಸುವ ಹೆಚ್ಚಿನ ಪ್ರಯಾಣಿಕರಿಗೆ UPI ಪಾವತಿಯ ಬಗ್ಗೆ ತಿಳಿದಿದೆ. ಇದರಿಂದ ಚಿಲ್ಲರೆ ಸಮಸ್ಯೆಯೂ ಬಗೆಹರಿಯಲಿದೆ.
ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗದ ವಿಭಾಗೀಯ ನಿಯಂತ್ರಕ ಎಚ್.ಟಿ. ವೀರೇಶ್ ಅವರ ಪ್ರಕಾರ, ನಗರ ವ್ಯಾಪ್ತಿಯ ಎಲ್ಲ ಬಸ್ ಸಿಬ್ಬಂದಿಗೆ ನೀಡಲಾದ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳಲ್ಲಿ (ಇಟಿಎಂ) ಯುಪಿಐ ಪಾವತಿ ವ್ಯವಸ್ಥೆ ಸಕ್ರಿಯಗೊಳಿಸಲಾಗಿದೆ. ಕಳೆದ ವಾರ ಪ್ರಾಯೋಗಿಕ ಚಾಲನೆ ನಡೆಸಿದ್ದು, ಈ ವಾರದಿಂದ, UPI ಬಳಸಿ ಪಾವತಿ ಮಾಡಲು ಅನುಮತಿಸಲಾಗಿದೆ” ಎಂದು ಹೇಳಿದರು.
“ಈ ಹೊಸ ವ್ಯವಸ್ಥೆ ಪರಿಚಯದೊಂದಿಗೆ ಯಾವುದೇ ಹೆಚ್ಚುವರಿ ವೆಚ್ಚ ಆಗುವುದಿಲ್ಲ. ಪಾವತಿಯಲ್ಲಿ ಯಾವುದೇ ವಿಫಲತೆಯ ಸಂದರ್ಭದಲ್ಲಿ, ಪ್ರಯಾಣಿಕರು ಏಳು ದಿನಗಳಲ್ಲಿ ಮೊತ್ತವನ್ನು ಮರಳಿ ಪಡೆಯಬಹುದು” ಎಂದು ಅವರು ಹೇಳಿದ್ದಾರೆ.