ಬೆಂಗಳೂರು: ಹಿಂದಿನ ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಮುಖ ಕಾಮಗಾರಿ ನಡೆಸುವ 5 ಇಲಾಖೆಗಳಲ್ಲಿ 40% ಭ್ರಷ್ಟಾಚಾರ ನಡೆಯುತ್ತಿದೆ ಎಂಬ ರಾಜ್ಯ ಗುತ್ತಿಗೆದಾರರ ಸಂಘದ ಆರೋಪ ಕುರಿತ ತನಿಖೆಗೆ ರಚಿಸಲಾಗಿದ್ದ ನಿವೃತ್ತಿ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ವಿಚಾರಣಾ ಆಯೋಗವು 20 ಸಾವಿರ ಪುಟಗಳ ಬೃಹತ್ ತನಿಖಾ ವರದಿಯನ್ನು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಿದೆ.
ಹಿಂದಿನ ಬಿಜೆಪಿ ಆಡಳಿತದ ಅವಧಿಯಲ್ಲಿನ ಕಾಮಗಾರಿಗಳ ಬಗ್ಗೆ ತನಿಖಾ ವರದಿಯನ್ನ ಸಲ್ಲಿಸಲಾಗಿದ್ದು, ಪ್ರಮುಖ 5 ಇಲಾಖೆಗಳಲ್ಲಿ ನಡೆದ ಎಲ್ಲಾ ಕಾಮಗಾರಿಗಳ ಬಗ್ಗೆ ಆಯೋಗ ಮಾಹಿತಿ ಕಲೆ ಹಾಕಿದೆ. ಹೀಗೆ ಒಟ್ಟು 20 ಸಾವಿರ ಪುಟಗಳ ವರದಿಯನ್ನ ಆಯೋಗ ಸಲ್ಲಿಸಿದ್ದು ಮಹತ್ವ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಕಮಿಷನ್ ಕದನ ಮತ್ತೆ ತಾರಕಕ್ಕೇರಿದ್ದು, ಈ ವರದಿ ಇಟ್ಟುಕೊಂಡು ಕಾಂಗ್ರೆಸ್, ಬಿಜೆಪಿ ಅವಧಿಯಲ್ಲಿನ 40% ಕಮಿಷನ್ ಆರೋಪವನ್ನ ಕೆದಕಲು ಸಜ್ಜಾಗಿದೆ.
ಆಯೋಗದ ವರದಿಯಲ್ಲಿ ಏನಿದೆ?
ಬಿಜೆಪಿ ಅವಧಿಯಲ್ಲಿನ ಕಾಮಗಾರಿಗಳ ಬಗ್ಗೆ ತನಿಖಾ ವರದಿಯನ್ನ ಸಿಎಂ ಸಿದ್ದರಾಮಯ್ಯಗೆ ಸಲ್ಲಿಸಲಾಗಿದೆ. ಪ್ರಮುಖ 5 ಇಲಾಖೆಗಳಲ್ಲಿ ನಡೆದ ಎಲ್ಲಾ ಕಾಮಗಾರಿಗಳ ಬಗ್ಗೆ ಆಯೋಗ ಮಾಹಿತಿ ಕಲೆ ಹಾಕಿದೆ. 2019-2023ರವರೆಗೆ ನಡೆದ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಿದೆ. ಸಾರ್ವಜನಿಕರ ದೂರು, ತಜ್ಞರ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಕಾಮಗಾರಿಗಳ ಬಗ್ಗೆ ನಾಗಮೋಹನದಾಸ್ ಆಯೋಗ ಮಾಹಿತಿ ಪಡೆದಿದೆ.
ಕಾಮಗಾರಿಗಳ ಸ್ಥಳಗಳು, ಲೆಕ್ಕ ಪತ್ರವನ್ನ ಪರಿಶೀಲಿಸಲಾಗಿದೆ. ಸೀನಿಯಾರಿಟಿಯ ವೇಳೆ ಬಿಲ್ ಪಾವತಿ ತಪ್ಪಿಸುತ್ತಿದ್ದ ಆರೋಪ ಕೇಳಿಬಂದಿತ್ತು. KRIDLನಿಂದ ನೇರಕಾಮಗಾರಿ ಟೆಂಡರ್ ತಪ್ಪಿಸೋದು ಹಾಗೂ 40% ಲಂಚ ಕೊಡಬೇಕು ಎಂದು ಗುತ್ತಿಗೆದಾರರ ಸಂಘ ಆರೋಪ ಮಾಡಿತ್ತು.
2019-23ರ ಅವಧಿಯಲ್ಲಿ ಲೋಕೋಪಯೋಗಿ, ಸಣ್ಣ ಮತ್ತು ಬೃಹತ್ ನೀರಾವರಿ ಇಲಾಖೆ, ನಗರಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ದಿ ಇಲಾಖೆಗಳಲ್ಲಿ ನಡೆದಿರುವ ಬೃಹತ್ ಕಾಮಗಾರಿಗಳಲ್ಲಿ ಶೇ.40ಕ್ಕಿಂತ ಹೆಚ್ಚಿನ ಕಮಿಷನ್ ಚಾಲ್ತಿಯಲ್ಲಿದೆ ಎಂಬ ಆರೋಪ ಬಗ್ಗೆ ಪ್ರಮುಖವಾಗಿ ತನಿಖೆ ನಡೆಸಲಾಗಿದೆ. ಜತೆಗೆ ಪ್ಯಾಕೇಜ್ ಪದ್ಧತಿ ಕೈಬಿಡುವುದು, ಎಸ್.ಆರ್.ದರಪಟ್ಟಿ ನಿಗದಿ, ಸ್ಟಾರ್ ರೇಟ್ ಪದ್ಧತಿ ಜಾರಿ, ಪಾರದರ್ಶಕತೆ ಕಾಪಾಡಿಕೊಳ್ಳುವಿಕೆ, ಸೀನಿಯಾರಿಟಿ ಮೇಲೆ ಬಿಲ್ ಪಾವತಿ, ಕೆಆರ್‌ಐಡಿಎಲ್‌ನಿಂದ ಗುತ್ತಿಗೆದಾರರಿಗೆ ನೇರವಾಗಿ ಕಾಮಗಾರಿಗಳ ನೀಡಿಕೆ ತಪ್ಪಿಸುವುದು ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಸರ್ಕಾರಕ್ಕೆ ಗುತ್ತಿಗೆದಾರರ ಸಂಘ ಮನವಿ ಮಾಡಿತ್ತು.
ಇಷ್ಟೇ ಅಲ್ಲ ನಿವೃತ್ತಿ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದ ಆಯೋಗವು, ನಾರಾಯಣಪುರ ಡ್ಯಾಮ್ ಆಧುನೀಕರಣದ ವೇಳೆ ನಡೆದ ಅಕ್ರಮದ ಆರೋಪದ ಬಗ್ಗೆ ತನಿಖೆ ನಡೆಸಿದ್ದು, ಅದರ ಅಂದಾಜು ಪಟ್ಟಿಯ ಅಕ್ರಮದ ಕುರಿತು ಸಿಎಂ ಸಿದ್ದರಾಮಯ್ಯಗೆ 1800 ಪುಟಗಳ ವರದಿ ಸಲ್ಲಿಸಲಾಗಿದೆ. ರಾಯಚೂರು ಜಿಲ್ಲೆ ವ್ಯಾಪ್ತಿಯಲ್ಲಿ ಬರುವ 1 ರಿಂದ 18 ರವರೆಗಿನ ಉಪ/ಸೀಳು ಕಾಲುವೆ ಆಧುನೀಕರಣ ಪ್ಯಾಕೇಜ್ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ.
ಇನ್ನು ಈ 40% ಕಮಿಷನ್ ಆರೋಪದ ಬಗ್ಗೆಯ ತನಿಖಾ ವರದಿ ಸಿಎಂ ಸಿದ್ದರಾಮಯ್ಯ ಕೈ ಸೇರುತ್ತಿದ್ದಂತೆ ರಾಜಕೀಯ ಕದನ ಜೋರಾಗಿದೆ. ಕಮಲ ಕಲಿಗಳೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 60% ನಡೆಯುತ್ತಿದೆ ಎಂದು ಟ್ವೀಟ್ ಮೂಲಕ ದಾಳಿ ಮಾಡಿದೆ. ಇನ್ನು ಕಾಂಗ್ರೆಸ್ ಏನು ಹೇಳುತ್ತೋ ಅದರಂತೆ ವರದಿ ಕೊಟ್ಟಿದ್ದಾರೆ ಎಂದು ವಿ.ಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.
ಒಟ್ಟಿನಲ್ಲಿ ಕಮಿಷನ್ ಆರೋಪವನ್ನೇ ಅಸ್ತ್ರವನ್ನಾಗಿಸಿಕೊಂಡು 2023 ರ ವಿಧಾನಸಭಾ ಚುನಾವಣೆಯಲ್ಲಿ ಮನೆ ಮನೆಗೆ ತಲುಪಿಸಿ ಬಿಜೆಪಿಯನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದು, ಇದೀಗ ಆಯೋಗದ ವರದಿ ಮೂಲಕ ಸಿಎಂ ಸಿದ್ದರಾಮಯ್ಯನವರ ಯಾವ ಕ್ರಮಕೈಗೊಳ್ಳುತ್ತಾರೆ? ಎಂಬುದು ಈಗ ಯಕ್ಷ ಪ್ರಶ್ನೆಯಾಗಿದೆ.