ಬೆಂಗಳೂರು:ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಲ್ಲಿ ಸಂಗ್ರಹವಾಗಿರುವ ಹಣ ಸುಮಾರು 8,200 ಕೋಟಿ ರು.ಗಳು, ಆದರೂ, ಕಾರ್ಮಿಕ ಇಲಾಖೆಗೆ ಕಾರ್ಮಿಕರಿಗೆ ಸೂಕ್ತ ಸಂದರ್ಭದಲ್ಲಿ ಸಹಾಯಹಸ್ತ ಚಾಚುವ ಮನಸ್ಸಿಲ್ಲದಿರುವುದು ವಿಪರ್ಯಾಸ.
ಕಾರ್ಮಿಕ ದಿನಾಚರಣೆ ಸಂದರ್ಭದಲ್ಲಿಯೇ ಕಾರ್ಮಿಕ ಇಲಾಖೆ ಮನಸ್ಥಿತಿಯನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು, ಗಮನಹರಿಸಿ ಪರಿಹರಿಸಬೇಕು ಎಂಬುದು ಕಾರ್ಮಿಕ ಸಂಘಟನೆಗಳ ಮುಖಂಡರ ಮನವಿ. ಈ ನಡುವೆ ಹೈಕೋರ್ಟ್ ಕೂಡ ಕಾರ್ಮಿಕ ಇಲಾಖೆಗೆ ತಪರಾಕಿ ಕೊಟ್ಟಿದ್ದು, ಬಡವರದ್ದೇ ಬೆವರಿನ ಇಷ್ಟೊಂದು ಹಣ ಸಂಗ್ರಹವಾಗಿದ್ದರೂ, ನೀವು ಪರಿಹಾರ ಕೊಡುವಲ್ಲಿ ಮೀನಾಮೇಷ ಎಣಿಸುವುದು ಏಕೆ ಎಂದು ಪ್ರಶ್ನಿಸಿದೆ.
ವಿದ್ಯಾಭ್ಯಾಸ ಮುಂದುವರಿಸಲು ಆರ್ಥಿಕ ನೆರವು ಕೋರಿ ಇಬ್ಬರು ಕಟ್ಟಡ ಕಾರ್ಮಿಕರ ಮಕ್ಕಳು ಸಲ್ಲಿಸಿದ್ದ ಅರ್ಜಿಯನ್ನು ಹತ್ತು ತಿಂಗಳಾದರೂ ಪರಿಗಣಿಸದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಆ ಇಬ್ಬರು ವಿದ್ಯಾರ್ಥಿಗಳಿಗೆ ಕೂಡಲೇ ಆರ್ಥಿಕ ನೆರವು ನೀಡಬೇಕು ಎಂದು ಎಚ್ಚರಿಕೆ ನೀಡಿದೆ.
ಸರ್ಕಾರ ಹೊಸ ಅಧಿಸೂಚನೆ ಮುನ್ನ ಇಬ್ಬರು ವಿದ್ಯಾರ್ಥಿನಿಯರು, ಮಂಡಳಿ ಹಿಂದೆ ನೀಡುತ್ತಿದ್ದ 30,000 ಹಾಗೂ 35, 000 ರೂ. ಶೈಕ್ಷಣಿಕ ಧನಸಹಾಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಹತ್ತು ತಿಂಗಳಾದರೂ ಕಲ್ಯಾಣ ಮಂಡಳಿ ಅರ್ಜಿ ಇತ್ಯರ್ಥ ಪಡಿಸಿಲ್ಲ. ಹೀಗಾಗಿ, ಶೈಕ್ಷಣಿಕ ಧನಸಹಾಯ ನೀಡಲು ನಿರ್ದೇಶನ ನೀಡುವಂತೆ ಕೋರಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಫೆಡರೇಶನ್ ಹಾಗೂ ವಿದ್ಯಾರ್ಥಿನಿಯರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, ವಿದ್ಯಾರ್ಥಿನಿಯರ ಅರ್ಜಿ ಶೈತ್ಯಾಗಾರದಲ್ಲಿಟ್ಟಿರುವ ಕ್ರಮ ಖಂಡನೀಯ. ಸರ್ಕಾರಿ ನೌಕರರಿಗೆ ಸಿಗುವ ಯಾವೊಂದು ಭತ್ಯೆ ಇಲ್ಲದೆ ಬೆವರು ಸುರಿಸುವ ಕಾರ್ಮಿಕರಿಗೆ ಅವರದ್ದೇ ಶ್ರಮದಿಂದ ಸಂಗ್ರಹವಾಗಿರುವ ೮,೨೦೦ ಕೋಟಿ ಕಲ್ಯಾಣ ನಿಧಿ ಇರುವಾಗಲೂ, ನ್ಯಾಯಬದ್ಧ ಧನಸಹಾಯ ನಿರಾಕರಿಸುವುದು ಒಪ್ಪುವಂಥದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಪ್ರಸ್ತುತ ಅರ್ಜಿ ಸಲ್ಲಿಸಿರುವ ಎಲ್‌ಎಲ್‌ಬಿ ಹಾಗೂ ಎಂಬಿಎ ವಿದ್ಯಾರ್ಥಿನಿಯರಿಗೆ ಕ್ರಮವಾಗಿ ೩೦ ಸಾವಿರ ಹಾಗೂ ೩೫ ಸಾವಿರ ರೂ. ಶೈಕ್ಷಣಿಕ ಧನಸಹಾಯವನ್ನು ದಂಡಸಹಿತ ಪಾವತಿಸಬೇಕು ಎಂದು ನ್ಯಾಯಪೀಠ ಆದೇಶಿಸಿತು. ಒಂದು ವೇಳೆ ಕಲ್ಯಾಣ ಮಂಡಳಿ ದಂಡಸಹಿತ ವಿದ್ಯಾರ್ಥಿಗಳ ಖಾತೆಗೆ ನಿಗದಿತ ಅವಧಿಯೊಳಗೆ ಪಾವತಿಸಲು ವಿಫಲವಾದರೆ, ಬಳಿಕ ಪ್ರತಿ ದಿನಕ್ಕೆ ೫೦೦ ರೂ. ದಂಡ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿತು.
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ದಂಡಸಹಿತ ಪಾವತಿಸಬೇಕು. ಇಬ್ಬರು ವಿದ್ಯಾರ್ಥಿನಿಯರಿಗೆ ಅವರು ತುಂಬಿರುವ ಕಾಲೇಜು ಶುಲ್ಕವನ್ನು ನಾಲ್ಕು ವಾರದೊಳಗೆ ಅವರ ಖಾತೆಗೆ ಪಾವತಿಸಬೇಕು ಎಂದು ಮಧ್ಯಂತರ ಆದೇಶ ನೀಡಿರುವ ನ್ಯಾಯಾಲಯ ವಿಚಾರಣೆಯನ್ನು ಜೂ. ೭ಕ್ಕೆ ಮುಂದೂಡಿದೆ.