ವಿಜಯಪುರ: ತಾಲೂಕಿನ ಮದಭಾವಿ ತಾಂಡಾ-1 ರ ಜನರು ಮುಂಬರುವ ಲೋಕಸಭಾ ಚುನಾವಣೆಗೆ ಮತದಾನ ಬಹಿಷ್ಕಾರ ಹಾಕಿದ್ದಾರೆ. ಸುಮಾರು 5 ಸಾವಿರಕ್ಕೂ ಆಧಿಕ ಜನಸಂಖ್ಯೆಯನ್ನು ಹೊಂದಿರೋ ತಾಂಡಾದಲ್ಲಿ, 3 ಸಾವಿರ ಮತದಾರರಿದ್ದಾರೆ. ಆದರೆ, 2024 ರ ಲೋಕಸಭಾ ಚುನಾವಣೆಗೆ ಮದಭಾವಿ ತಾಂಡಾದವರು ಮತದಾನ ಮಾಡಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಏಕೆಂದರೆ ಕಳೆದ 6 ವರ್ಷಗಳ ಹಿಂದೆ ಮದಭಾವಿ ತಾಂಡಾ-1 ರ ಅನತಿ ದೂರದಲ್ಲಿ ಮುಂಬೈ ಮೂಲದ ಹೆಸರಿರುವ ಉದ್ಯಮಿ, ಟೈರ್ ನಾಶ ಮಾಡಿ ಇತರೆ ರಾಸಾಯನಿಕ ಉತ್ಪಾದನೆ ಮಾಡುವ ಕಾರ್ಖಾನೆ ಸ್ಥಾಪಿಸಿದ್ದಾರೆ. ಈ ಕಾರ್ಖಾನೆಯಿಂದ ವಿಪರೀತ ಕೆಟ್ಟ ವಾಸನೆಯ ಜೊತೆಗೆ ಹೊಗೆ ಹೊರಬರುತ್ತಿದೆ.
ಕಾರ್ಖಾನೆ ಬಂದ್ ಮಾಡಿಲ್ಲವೆಂದರೆ ಮತದಾನ ಬಹಿಷ್ಕಾರದ ಎಚ್ಚರಿಕೆ…
ಕಾರ್ಖಾನೆಯ ವಿಷಪೂರಿತ ಹೊಗೆ ಮದಭಾವಿ ತಾಂಡಾ 1 ಹಾಗೂ ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ವಿಷಕಾರಿ ಹೊಗೆಯ ಕಾರಣ ಜನರು ಪಾರ್ಶುವಾಯು, ಶ್ವಾಸಕೋಶದ ತೊಂದರೆ, ಹೃದಯ ಸ್ತಂಭನ, ಮಹಿಳೆಯರಲ್ಲಿ ಗರ್ಭಪಾತ ಸೇರಿದಂತೆ ಇತರೆ ರೋಗಗಳಿಂದ ಬಾಧಿತರಾಗಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ದರು ಅನೇಕ ರೋಗಗಳಿಂದ ಬಳಲುವಂತಾಗಿದೆ. ಇಷ್ಟೆಲ್ಲ ಅವಾಂತರಕ್ಕೆ ಕಾರಣವಾದ ಈ ಕಾರ್ಖಾನೆಯನ್ನು ಬಂದ್ ಮಾಡಬೇಕೆಂದು ಕೆಲ ವರ್ಷಗಳಿಂದ ಜಿಲ್ಲಾಡಳಿತ ಸೇರಿದಂತೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಆರೋಗ್ಯಕ್ಕೆ ಮಾರಕವಾಗಿರುವ ಕಾರ್ಖಾನೆ ಬಂದ್ ಮಾಡಿಸಿಲ್ಲ. ಹಾಗಾಗಿ ಕಾರ್ಖಾನೆ ಬಂದ್ ಮಾಡೋವರೆಗೂ ನಾವು ಲೋಕಸಭಾ ಚುನಾವಣೆ ಮತದಾನ ಬಹಿಷ್ಕಾರ ಹಾಕುತ್ತೇವೆಂದು ಇಡೀ ತಾಂಡಾದ ಜನರು ನಿರ್ಧಾರ ಮಾಡಿದ್ದಾರೆ.
ಅನಾರೋಗ್ಯಕ್ಕೆ ಕಾರಣವಾಗಿರುವ ಟೈರ್ ನಾಶ ಮಾಡುವ ಕಾರ್ಖಾನೆ ಮೇಲೆ ಜಿಲ್ಲಾಡಳಿತ, ಕೈಗಾರಿಕಾ ಇಲಾಖೆ ಆಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದಿರೋದಕ್ಕೆ ಜನರು ತೀವ್ರ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಕಾರ್ಖಾನೆಯಿಂದ ನಮ್ಮ ಹಾಗೂ ಸುತ್ತಮುತ್ತಲಿನ ಜನರ ಆರೋಗ್ಯ ಅಷ್ಟೇ ಅಲ್ಲ, ಕೃಷಿಕರ ಬೆಳಗಳ ಮೇಲೂ ತೀವ್ರ ಪರಿಣಾಮ ಬೀರಿದೆ. ದ್ರಾಕ್ಷಿ ಸೇರಿದಂತೆ ತೋಟಗಾರಿಕೆ ಬೆಳೆಗಳು ಹಾಗೂ ಇತರೆ ಬೆಳೆಗಳು ವಿಷಪೂರಿತ ಹೊಗೆಯಿಂದ ಹಾಳಾಗಿವೆ. ಈ ಕುರಿತು ಆಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವೇ ಇಲ್ಲವಾಗಿದೆ ಎಂದು ತಾಂಡಾದ ಜನರು ಆಕ್ರೋಶವನ್ನು ಹೊರ ಹಾಕಿದ್ಧಾರೆ.
ಹತ್ತಾರು ಸಮಸ್ಯೆಗೆ ಕಾರಣವಾಗಿರುವ ಈ ಫ್ಯಾಕ್ಟರಿ ಮುಚ್ಚಿದ್ರೆ ಮಾತ್ರ ಮತದಾನ ಮಾಡುತ್ತೇವೆ. ಇಲ್ಲದಿದ್ದರೆ ನಮ್ಮೂರ ಒಳಗೆ ಯಾವ ಪಕ್ಷದ ಅಭ್ಯರ್ಥಿ, ಮುಖಂಡರನ್ನು ಅಧಿಕಾರಿಯನ್ನು ನಮ್ಮದು ಬಿಡುವುದಿಲ್ಲ ಎಂದು ತಾಂಡಾದ ಜನರು ಲೋಕಸಭಾ ಚುನಾವಣಾ ಮತದಾನ ಬಹಿಷ್ಕಾರ ಹಾಕುವ ನಿರ್ಧಾರ ಮಾಡಿದ್ದಾರೆ. ವಿಷಕಾರಿ ಹೊಗೆ-ಧೂಳಿನಿಂದ ಜನರ ಪ್ರಾಣಕ್ಕೆ ಕುತ್ತಾಗಿರುವ ಟೈರ್ ನಾಶ ಮಾಡುವ ಹಾಗೂ ರಾಸಾಯನಿಕ ಉತ್ಪಾದನೆ ಮಾಡುವ ಕಾರ್ಖಾನೆಯ ವಿರುದ್ದ ಈಗಲಾದರೂ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಾರಾ? ಎಂದು ಕಾದುನೋಡಬೇಕಾಗಿದೆ.