ಕೋಲಾರ : ಲೋಕಸಭೆ ಚುನಾವಣೆಗೆ ದಿನಗಣನೆ ಶುರುವಾಗುತ್ತಿರುವ ಹೊತ್ತಲ್ಲಿ ಕೇಂದ್ರ ನಾಯಕರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಇಂದು ಬೆಳಗ್ಗೆ ಮಂಡ್ಯದಲ್ಲಿ ಭರ್ಜರಿ ಮತಯಾಚನೆ ಮಾಡಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಇದೀಗ ಕೋಲಾರಕ್ಕೆ ಆಗಮಿಸಿದ್ದಾರೆ. ಜಿಲ್ಲೆಯ ಮಾಲೂರು ತಾಲೂಕಿನ ಚೊಕ್ಕಂಡಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಚಿಕ್ಕವನಿದ್ದಾಗ ಕೋಲಾರ ಗೋಲ್ಡ್ ಫೀಲ್ಡ್ಗೆ ಇಂದಿರಾಗಾಂಧಿ ಅವರ ಜೊತೆ ಬಂದಿದ್ದೆ. ಸುರಂಗದ ಒಳಗೆ ಹೋಗಿ ಅಲ್ಲಿ ಕಾರ್ಮಿಕರನ್ನ ಮಾತನಾಡಿಸಿದ್ದು ನೆನಪಿದೆ ಎಂದು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ.
ಅಲ್ಲಿ ಚಿನ್ನದ ಇಟ್ಟಿಗೆಯನ್ನ ನೋಡಿದೆ. ಅಲ್ಲಿ ಕೋಲಾರ ಸಂಪನ್ಮೂಲ ಆ ಗಣಿಯಲ್ಲಿದೆ ಎಂದು ತಿಳಿಯಿತು. ರೈತರಾಗಿ, ಕಾರ್ಮಿಕರಾಗಿ ದುಡಿದು ಗೌರವ ತರುತ್ತಿದ್ದೀರ. ನನ್ನ ರಾಜಕಾರಣದ ಗುರುಗಳು ಇಂದಿರಾ ಗಾಂಧಿ ಅವರು. ಅವರು ಹಲವಾರು ರಾಜಕೀಯ ವಿಚಾರಗಳನ್ನು ಹೇಳಿಕೊಟ್ಟಿದ್ದಾರೆ. ಹಲವಾರು ಜನ ರಾಜಕಾರಣವನ್ನ ಕಷ್ಟದ ಕೆಲಸ ಎಂದುಕೊಂಡಿದ್ದಾರೆ. ರಾಜಕಾರಣ ಮಾಡಬೇಕಾದರೆ ಸಾಕಷ್ಟು ಪ್ಲಾನ್ ಮಾಡಬೇಕು ಅಂದಿಕೊಂಡಿದ್ದಾರೆ. ಆದರೆ ಇಂದಿರಾಗಾಂಧಿ ಈ ರೀತಿಯ ರಾಜಕಾರಣ ಮಾಡಲಿಲ್ಲ ಎಂದು ಹೇಳಿದರು.
ಅವರು ನನ್ನೊಂದಿಗೆ ಮಾತನಾಡಿದಾಗ ಒಂದು ಅಂಶ ಹೇಳಿದರು. ಆ ಒಂದು ಪಾಠದಿಂದ ಪೂರ್ತಿ ರಾಜಕಾರಣ ಅರ್ಥ ಮಾಡಿಕೊಳ್ಳಬಹುದು. ರಾಹುಲ್ ನಾಯಕನಿಗೆ ಇರುವುದು ಒಂದೇ ಕೆಲಸ. ಒಬ್ಬ ನಾಯಕ ಸಮಾಜದಲ್ಲಿರುವ ತಾರತಮ್ಯವನ್ನ ಗುರುತಿಸಬೇಕು. ಆ ತಾರತಮ್ಯವನ್ನ ಹೆಜ್ಜೆ ಹಿಂದೆ ಇಡದೆ ಮಾಡಬೇಕು. ಅವರು ಹೇಳಿಕೊಟ್ಟ ಪಾಠದಲ್ಲಿ ಇದೆ ಅತ್ಯಂತ ಪ್ರಮುಖವಾದುದು ಎಂದರು.
ಈ ದೇಶದಲ್ಲಿ ಕೋಟ್ಯಂತರ ರೈತರು ವ್ಯವಸಾಯ ಮಾಡುತ್ತಿದ್ದಾರೆ. ಇವಾಗ ನಾವು ರೈತರ ಸಾಲ ಮನ್ನಾ ಮಾಡಿದರೆ, ಮುಂದೆ 25 ವರ್ಷಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಕ್ಕೆ ಆಗುವಷ್ಟು ಆ ಬಿಲೆನಿಯರ್ಸ್ಗೆ ನೀಡಿದ್ದಾರೆ. 22 ಜನ ಬಿಲೆನಿಯರ್ಸ್ ಆಸ್ತಿ, ಇಡೀ ದೇಶದ ಆಸ್ತಿ ಒಂದೇ. ಈ ದೇಶದ ಆಸ್ತಿ ಬರೀ 22 ಜನರ ಹತ್ತಿರ ಮಾತ್ರ ಇದೆ ಎಂದು ಕಿಡಿಕಾರಿದ್ದಾರೆ.
ಗಂಭೀರ ವಿಚಾರ ಪ್ರಸ್ತಾಪಿಸಿದ ರಾಹುಲ್ ಗಾಂಧಿ: ದೊಡ್ಡ ಉದ್ಯಮಿಗಳ ಕಂಪನಿಗಳಲ್ಲಿ ಹಿಂದುಳಿದ ವರ್ಗದವರು ಇಲ್ಲ. ಕಂಪನಿಗಳ ಉನ್ನತ ಹುದ್ದೆಯಲ್ಲಿ ಹಿಂದುಳಿದವರು ಯಾರೂ ಇಲ್ಲ. ದೊಡ್ಡ ದೊಡ್ಡ ಕಂಪನಿಗಳಲ್ಲಿ ಹಿಂದುಳಿದ ವರ್ಗದವರಿಗೆ ಸ್ಥಾನವೇ ಇಲ್ಲ. ದೇಶದ ಶೇ.90ರಷ್ಟು ಜನರು ಈ ಉದ್ಯಮಿಗಳ ಕಂಪನಿಗಳಲ್ಲಿ ಇಲ್ಲ. ದೇಶದಲ್ಲಿ ಒಬಿಸಿ ಸಮುದಾಯದರು ಶೇ.50ರಷ್ಟು ಇದ್ದಾರೆ. ಆದರೆ 90 ಅಧಿಕಾರಿಗಳ ಪೈಕಿ ಕೇವಲ ಮೂವರು ಒಬಿಸಿಯವರು. ದಲಿತರು ಹಾಗೂ ಆದಿವಾಸಿಗಳಿಗೆ ಅಧಿಕಾರದಲ್ಲಿ ಅವಕಾಶವೇ ಇಲ್ಲ ಎಂದು ಹೇಳಿದ್ದಾರೆ.