ರಾಜಕೀಯ ಸುದ್ದಿ

ಮುಡಾದ 14 ನಿವೇಶನ ಸಂಪೂರ್ಣ ಅಕ್ರಮ: ನಿವೇಶನದ ಕ್ರಯ ರದ್ದತಿಗೆ ಅಧಿಸೂಚನೆ ಹೊರಡಿಸಲಿ; ವಿಜಯೇಂದ್ರ

Share It

ಬೆಂಗಳೂರು: ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ’ ಕನಿಷ್ಟ ಈಗಲಾದರೂ ಲೂಟಿಕೋರ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರು ಮುಡಾ ಹಿಂದಿನ ಆಯುಕ್ತ ದಿನೇಶ್ ಕುಮಾ‌ರ್ ಅವರನ್ನು ಅಮಾನತು ಮಾಡಿರುವ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

‘ಶೇ. 50:50ರ ಅನುಪಾತದಲ್ಲಿ ಪೂರ್ವಾನ್ವಯವಾಗಿ ನಿವೇಶನ ಪಡೆಯುವುದು ನಿಯಮಬಾಹಿರ ಎಂದು ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಿಸಿದ್ದ ತಾಂತ್ರಿಕ ಸಮಿತಿ ಕಳೆದ 3-11-2023 ರಂದೇ ಕಾಂಗ್ರೆಸ್ ಸರ್ಕಾರಕ್ಕೆ ವಿಸ್ತ್ರತ ವರದಿ ಸಲ್ಲಿಸಿತ್ತು. ಈ ವರದಿಯಲ್ಲಿ ಮುಡಾದಲ್ಲಿ ನಡೆಯುತ್ತಿದ್ದ ಬ್ರಹ್ಮಾಂಡ ಭ್ರಷ್ಟಾಚಾರಗಳ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಲಾಗಿತ್ತು.

ರಾಜ್ಯದ ಕಾಂಗ್ರೆಸ್ ಸರ್ಕಾರ ಭ್ರಷ್ಟ ಹಗರಣಗಳ ರಕ್ಷಣೆಯ ಪ್ರತೀಕವೆಂಬಂತೆ ಧೂಳು ಹಿಡಿದು ಕುಳಿತಿದ್ದ ತಾಂತ್ರಿಕ ಸಮಿತಿಯ ತನಿಖಾ ವರದಿಯ ಪ್ರತಿಯನ್ನು ನಾವು ಬಿಡುಗಡೆ ಮಾಡಿದ ನಂತರ ವಿಧಿ ಇಲ್ಲದೆ ಕೈಗೆತ್ತಿಕೊಂಡು ಇದೀಗ ಮುಡಾ ಬ್ರಹ್ಮಾಂಡ ಭ್ರಷ್ಟಾಚಾರದ ರೂವಾರಿಗಳಲ್ಲೊಬ್ಬರಾದ ಹಿಂದಿನ ಆಯುಕ್ತ ಜಿ. ಟಿ.ದಿನೇಶ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ.

ಸರ್ಕಾರ ಈ ಕೂಡಲೇ 50:50 ಅನುಪಾತದಲ್ಲಿ ಮುಡಾದಲ್ಲಿ ವಿತರಣೆಯಾಗಿರುವ ಸಾವಿರಾರು ನಿವೇಶನಗಳ ಕ್ರಯವನ್ನು ರದ್ದುಗೊಳಿಸಿ ಅಧಿಸೂಚನೆ ಹೊರಡಿಸಲಿ. ಶೇ 50:50 ರ ಅನುಪಾತದಲ್ಲಿ ಪೂರ್ವನ್ವಯವಾಗಿ ಸಿದ್ದರಾಮಯ್ಯನವರ ಪತ್ನಿಯವರಿಗೆ ಮಂಜೂರಾಗಿರುವ 14 ನಿವೇಶನಗಳು ಸಂಪೂರ್ಣ ಅಕ್ರಮ ಹಾಗೂ ನಿಯಮಬಾಹಿರ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ

ಸಿದ್ದರಾಮಯ್ಯ ಅವರ ಕುಟುಂಬಕ್ಕೆ 14 ನಿವೇಶನಗಳನ್ನು ಬಳುವಳಿ ನೀಡಿದ ಹಿಂದಿನ ಆಯುಕ್ತರೊಬ್ಬರ ವಿರುದ್ಧ ಯಾವುದೇ ಕ್ರಮ ಜರುಗಿಸದೇ ಋಣ ಸಂದಾಯ ಮಾಡಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದರಾಮಯ್ಯನವರು ನ್ಯಾಯಾಲಯದ ಆದೇಶವನ್ನು ಕಾಯುವ ಆಗತ್ಯವಾದರೂ ಏನಿದೆ? ಸರ್ಕಾರವೇ ಮುಖ್ಯಮಂತ್ರಿ ಅವರ ಪತ್ನಿ ಪಡೆದಿರುವ ನಿವೇಶನ ಅಕ್ರಮ ಹಾಗೂ ನಿಯಮಬಾಹಿರ ಎಂದು ಹೇಳಿರುವಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸ್ಥಾನದ ಘನತೆಗೆ ಬಂದಿರುವ ಚ್ಯುತಿಯನ್ನು ಹೋಗಲಾಡಿಸಿ ಗೌರವ ಉಳಿಸಿಕೊಳ್ಳಿ ಎಂದು ವಾಗ್ದಾಳಿ ನಡೆಸಿದ್ದಾರೆ.


Share It

You cannot copy content of this page