ಉಪಯುಕ್ತ ಸುದ್ದಿ

ಅಕ್ರಮ ವಲಸೆ ತಡೆಗೆ ಜಿಲ್ಲಾ ಮಟ್ಟದ ಸಮಿತಿ ರಚಿಸಿ: ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

Share It

ಬೆಂಗಳೂರು: ಅಕ್ರಮ ವಲಸೆ ತಡೆಗಟ್ಟುವ ಸಂಬಂಧ ಮುಂದಿನ ಮೂರು ತಿಂಗಳೊಳಗೆ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.

ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎನ್ನಲಾದ ಬಾಂಗ್ಲಾದೇಶದ ಪ್ರಜೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ಡಾ. ಟಿ. ನಾಗೇಂದ್ರಪ್ಪ ಎಂಬುವವರ ವಿರುದ್ಧ ದಾಖಲಾಗಿದ್ದ ಎರಡು ಎಫ್‌ಐಆರ್‌ಗಳನ್ನು ವಜಾಗೊಳಿಸಿ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ನಾಗೇಂದ್ರಪ್ಪ ಅವರು ತಮ್ಮ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಗಳನ್ನು ವಜಾಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿದ ನ್ಯಾಯಾಲಯವು ಬೆಳ್ಳಂದೂರು ಮತ್ತು ವರ್ತೂರು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಎರಡೂ ಪ್ರಕರಣಗಳನ್ನು ವಜಾಗೊಳಿಸಿದೆ.

ಇದೇ ವೇಳೆ, ತಮ್ಮ ಬಂಧನವನ್ನು ಪ್ರಶ್ನಿಸಿ ಹಾಗೂ ಕಾನೂನು ಬಾಹಿರವಾಗಿ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದಕ್ಕಾಗಿ ಪರಿಹಾರ ಕೋರಿ ನಾಗೇಂದ್ರಪ್ಪ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಅಕ್ರಮ ವಲಸೆಯನ್ನು ನಿಭಾಯಿಸಲು ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಆದೇಶದ ಪ್ರತಿ ಸ್ವೀಕರಿಸಿದ ದಿನಾಂಕದಿಂದ ಮೂರು ತಿಂಗಳೊಳಗೆ ಸದರಿ ಸಮಿತಿಗಳನ್ನು ರಚಿಸಬೇಕು. ಈ ಸಂಬಂಧದ ಅನುಪಾಲನಾ ವರದಿಯನ್ನು ಹೈಕೋರ್ಟ್​ನ ರಿಜಿಸ್ಟ್ರಿಗೆ ಸಲ್ಲಿಸಬೇಕು ಎಂದು ಪೀಠ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: 2026ರ ಜುಲೈ 22 ರಂದು ಬೆಂಗಳೂರಿನ ಡಿಎಸ್ ಮ್ಯಾಕ್ಸ್ ಅಪಾರ್ಟ್‌ಮೆಂಟ್​ಗಳ ಸಮೀಪ ಆರು ಮಂದಿ ಬಾಂಗ್ಲಾದೇಶದ ಪ್ರಜೆಗಳು ಪಾಸ್‌ಪೋರ್ಟ್ ಅಥವಾ ವೀಸಾ ಇಲ್ಲದೆ ನೆಲೆಸಿದ್ದಾರೆ ಎಂದು ಬೆಳ್ಳಂದೂರು ಪೊಲೀಸರಿಗೆ ನಾಗೇಂದ್ರಪ್ಪ ದೂರು ನೀಡಿದ್ದರು.

ಬಳಿಕ ಪೊಲೀಸರು ಆ ವ್ಯಕ್ತಿಗಳನ್ನು ಗಡಿಪಾರು ಪ್ರಕ್ರಿಯೆಗಾಗಿ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್ಒ) ಕರೆದೊಯ್ದಿದ್ದರು ಎಂದು ಅರ್ಜಿದಾರರು ತಿಳಿಸಿದ್ದಾರೆ. ಆದರೆ, ಇದಾದ ಸುಮಾರು 15 ನಿಮಿಷಗಳಲ್ಲೇ ಬಾಂಗ್ಲಾದೇಶಿ ಮಹಿಳೆಯೊಬ್ಬರು ನಾಗೇಂದ್ರಪ್ಪ ವಿರುದ್ಧ ಹಲ್ಲೆಯ ಆರೋಪ ಮಾಡಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದಲ್ಲಿ ಬೆಳ್ಳಂದೂರು ಪೊಲೀಸರು ಬಿಎನ್‌ಎಸ್​ನ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಾಥಮಿಕ ಪರಿಶೀಲನೆ ನಡೆಸದೆ ಹಾಗೂ ದೂರುದಾರರ ವೈದ್ಯಕೀಯ ಪರೀಕ್ಷೆ ಮಾಡಿಸದೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ನಾಗೇಂದ್ರಪ್ಪ ಆರೋಪಿಸಿದ್ದರು. ಜುಲೈ 23, 2026ರಂದು ತಮ್ಮನ್ನು ಬಂಧಿಸಲಾಗಿದ್ದು, ಬಂಧನಕ್ಕೂ ಮುನ್ನ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 35(3) ಅಡಿಯಲ್ಲಿ ಹಾಜರಾತಿಗೆ ನೋಟಿಸ್ ನೀಡಿರಲಿಲ್ಲ ಮತ್ತು ಸೆಕ್ಷನ್ 35(1)ರ ಅಗತ್ಯಗಳಿಗೆ ಅನುಗುಣವಾಗಿ ಬಂಧನಕ್ಕೆ ಕಾರಣ ದಾಖಲಿಸಿರಲಿಲ್ಲ. ಬಂಧನದ ಮೆಮೊ ಹಾಗೂ ಬಂಧನದ ಕಾರಣಗಳನ್ನು ಸಮರ್ಪಕವಾಗಿ ತಿಳಿಸಿರಲಿಲ್ಲ ಎಂದು ಅವರು ಆಕ್ಷೇಪಿಸಿದ್ದರು.


Share It

You cannot copy content of this page