ಬೆಂಗಳೂರು: ನಗರದ ಎಲ್ಲಾಗುಂಡಿಗಳನ್ನು ಸೆ.15ರೊಳಗೆ ಮುಚ್ಚಬೇಕು ಎಂದು ಅಧಿಕಾರಿಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ.
ಭಾನುವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು.
ಬೇರೆ ಕಾಮಗಾರಿಗಳನ್ನು ಬದಿಗೊತ್ತಿ ನಗರದಲ್ಲಿರುವ ಗುಂಡಿಗಳನ್ನು ಮುಚ್ಚಬೇಕು. ರಸ್ತೆಗಳನ್ನು ಗುಂಡಿ ಮುಕ್ತ ಮಾಡಲು ವಾರ್ಡ್ ಮಟ್ಟದ ಎಲ್ಲಾ ಅಧಿಕಾರಿಗಳು, ಅವರ ಶ್ರೇಣಿಯನ್ನು ಲೆಕ್ಕಿಸದೆ, ಕೆಲಸಕ್ಕಿಳಿದು ಕಾಮಗಾರಿಗಳ ಮೇಲ್ವಿಚಾರಣೆ ಮಾಡಬೇಕು ಎಂದು ಸೂಚನೆ ನೀಡಿದರು.
ಸಾರ್ವಜನಿಕರಿಂದ ದೂರುಗಳು ಬಂದರೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸೆಪ್ಟೆಂಬರ್ನಲ್ಲಿ ಹಠಾತ್ ಮಳೆಯಾಗುವ ನಿರೀಕ್ಷೆಯಿರುವುದರಿಂದ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗುವ ಮತ್ತು ಕೆಲವು ಪ್ರದೇಶಗಳಲ್ಲಿ ಜಲಾವೃತವಾಗುವ ಸಾಧ್ಯತೆಗಳಿವೆ. ಈ ಕುರಿತು ಕ್ರಮಕೈಗೊಳ್ಳಲು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಗಾಂಧಿ ಜಯಂತಿಯಂದು ನಗರದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳನ್ನು ಸೇರಿಸಿ ಬೃಹತ್ ಸ್ವಚ್ಛತಾ ಜಾಗೃತಿ ಅಭಿಯಾನ ನಡೆಸುವಂತೆ ಸೂಚನೆ ನೀಡಿದರು.

