ಸುದ್ದಿ

ನೀನೇನ್ ‘ಡಾನಾ’ ಎನ್ನುವಂತಿಲ್ಲ ಒಡಿಶಾ ಹಾಗೂ ಪಶ್ಚಿಮ ಬಂಗಾಳ ಜನತೆ: ಬಂದಾಗಿದೆ ಚಂಡಮಾರುತ

Share It

ಭುವನೇಶ್ವರ: ಒಡಿಶಾ ಹಾಗೂ ಪಶ್ಚಿಮ ಬಂಗಾಳಕ್ಕೆ ಗುರುವಾರ ತಡರಾತ್ರಿ ಡಾನಾ ಚಂಡಮಾರುತ ಅಪ್ಪಳಿಸಿದ್ದು, ಆ ಸಮಯದಲ್ಲಿ ಗಾಳಿಯ ವೇಗ ಗಂಟೆಗೆ 110-120 ಕಿಲೋಮೀಟರ್ ಆಗಿತ್ತು.

ಒಡಿಶಾದ ಭುವನೇಶ್ವರ್, ಪುರಿ, ಪರದೀಪ್ ಮತ್ತು ಧಮ್ರಾ ಬಂದರು ಪ್ರದೇಶಗಳಲ್ಲಿ ನಿರಂತರವಾಗಿ ಭಾರಿ ಮಳೆಯಾಗುತ್ತಿದೆ. ಒಡಿಶಾದ ಸುಮಾರು 12 ಜಿಲ್ಲೆಗಳಲ್ಲಿ ಹೈ ಅಲರ್ಟ್ ಮುಂದುವರಿದಿದೆ. ಮುಂದಿನ ಎರಡು ದಿನಗಳ ಕಾಲ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚಿಸಿದೆ.

ಒಡಿಶಾ ಸರ್ಕಾರವು ಸುಮಾರು 800 ಪರಿಹಾರ ಕೇಂದ್ರಗಳನ್ನು ತೆರೆದಿದ್ದು, ಭಾರತೀಯ ಕರಾವಳಿ ಕಾವಲು ಪಡೆ, ಎನ್‌ಡಿಆರ್‌ಎಫ್ ಮತ್ತು ಒಡಿಆರ್‌ಎಫ್ ತಂಡಗಳು ರಕ್ಷಣೆ, ಪರಿಹಾರ ಕಾರ್ಯದಲ್ಲಿ ನಿರತವಾಗಿವೆ.

ಡಾನಾ ಚಂಡಮಾರುತದ ಪ್ರಭಾವ ಜಾರ್ಖಂಡ್‌ನಲ್ಲೂ ಕಾಣಿಸಿಕೊಂಡಿದೆ. ಮುಂದಿನ ಎರಡು ದಿನಗಳಲ್ಲಿ ರಾಂಚಿ, ಜಮ್‌ಶೆಡ್‌ಪುರ, ಚೈಬಾಸಾ ಮತ್ತು ಸೆರೈಕೆಲಾ-ಖುಂಟಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

300 ಕ್ಕೂ ಹೆಚ್ಚು ರೈಲುಗಳು ರದ್ದು: ಡಾನಾ ಚಂಡಮಾರುತವು ಪಶ್ಚಿಮ ಬಂಗಾಳದಲ್ಲೂ ಭಾರಿ ಹಾನಿ ಉಂಟುಮಾಡಿದೆ. ಸಿಎಂ ಮಮತಾ ಬ್ಯಾನರ್ಜಿ ರಾತ್ರಿಯಿಡೀ ಜಾಗರಣೆ ಮಾಡಿ ಪರಿಸ್ಥಿತಿ ಅವಲೋಕಿಸಿದರು. ಪಶ್ಚಿಮ ಬಂಗಾಳ, ಒಡಿಶಾ ಮತ್ತು ಛತ್ತೀಸ್‌ಗಢದ ಮೂಲಕ ಹಾದುಹೋಗುವ 300 ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿದೆ.

ಮುನ್ನೆಚ್ಚರಿಕೆ ಕ್ರಮಗಳ ಭಾಗವಾಗಿ ಗುರುವಾರ ಸಂಜೆ ಸ್ಥಗಿತಗೊಂಡಿದ್ದ ಭುವನೇಶ್ವರದ ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸೇವೆಗಳು ಇಂದು ಬೆಳಿಗ್ಗೆ 8 ಗಂಟೆಗೆ ಪುನರಾರಂಭಗೊಂಡಿವೆ.

ಬಂಗಾಳದಲ್ಲಿ 2,43,374 ಜನರು ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಒಡಿಶಾದಲ್ಲಿ, ಸುಮಾರು 5.8 ಲಕ್ಷ ಜನರನ್ನು ಸ್ಥಳಾಂತರಿಸಲಾಗಿತ್ತು. ಇವರೆಲ್ಲ ಸದ್ಯ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.


Share It

You cannot copy content of this page