ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಪೆಟ್ರೋಲ್ ಬಾಂಬ್ ಎಸೆದ ಕಿಡಿಗೇಡಿಗಳು
ಬೆಳಗಾವಿ : ಬೆಳಗಾವಿ ತಾಲೂಕು ಕಲಕಾಂಬ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಶುಕ್ರವಾರ ತಡರಾತ್ರಿ ಕಿಡಿಗೇಡಿಗಳು ಪೆಟ್ರೋಲ್ ಬಾಂಬ್ ಎಸೆದು ಬೆಂಕಿ ಹಚ್ಚಲು ಪ್ರಯತ್ನ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಕಚೇರಿಯ ಪೀಠೋಪಕರಣಕ್ಕೆ ಹಾನಿಯಾಗಿದೆ. ಸಿಸಿಟಿವಿ ಕ್ಯಾಮರಾ ಕಿತ್ತು ಬಂದಿದೆ.
ಈ ವಿಷಯ ಶನಿವಾರ ಸ್ಥಳೀಯರಿಗೆ ಗೊತ್ತಾಯಿತು. ಪೆಟ್ರೋಲ್ ತುಂಬಿ ಅದಕ್ಕೆ ಬೆಂಕಿ ಹಚ್ಚಿ ಗ್ರಾಮ ಪಂಚಾಯಿತಿ ಕಿಟಕಿಯ ಮೂಲಕ ಒಳಗೆ ಎಸಗಲಾಗಿದೆ. ಕಾಗದ ಪತ್ರಗಳಿಗೆ ಯಾವುದೇ ಹಾನಿಯಾಗಿಲ್ಲ. ಆದರೆ ಟೇಬಲ್, ಕುರ್ಚಿಗಳಿಗೆ ಹಾನಿಯಾಗಿದೆ.
ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಶುಕ್ರವಾರ ಗ್ರಾಮದಲ್ಲಿ ಕೆಲ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಗ್ರಾಮದ ಒಂದು ಗುಂಪು ಅವರನ್ನು ಆಹ್ವಾನಿಸಿತ್ತು. ಸಂಸದೆಯನ್ನು ವಾಲ್ಮೀಕಿ ಗಲ್ಲಿಗೂ ಕರೆದುಕೊಂಡು ಬರಬೇಕು ಎಂದು ಮತ್ತೊಂದು ಗುಂಪು ಆಗ್ರಹಿಸಿತ್ತು. ಈ ಸಂಬಂಧ ಎರಡೂ ಗುಂಪುಗಳ ನಡುವೆ ಗಲಾಟೆ ಆಗಿತ್ತು.
ಗ್ರಾಮ ಪಂಚಾಯಿತಿಗೆ ಪೆಟ್ರೋಲ್ ಬಾಂಬ್ ಎಸೆದ ಘಟನೆಗೂ ಈ ಗುಂಪುಗಳ ನಡುವೆ ನಡೆದ ಘಟನೆಗೂ ಸಂಬಂಧ ಇರಬಹುದು ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾರಿಹಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.