ರಾಜಕೀಯ ಸುದ್ದಿ

ಎಸ್ಸಿ-ಎಸ್ಟಿ ವರ್ಗಗಳಿಗೆ ವಿಶೇಷ ಅನುದಾನ, ದೇಶದಲ್ಲಿ ಜಾತಿ ಗಣತಿ ಜಾರಿ: ಪ್ರಿಯಾಂಕಾ ಗಾಂಧಿ

Share It

ಚಿತ್ರದುರ್ಗ : ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಎಸ್​ಸಿ, ಎಸ್​ಟಿಗೆ ವಿಶೇಷ ಅನುದಾನವನ್ನು ನೀಡುತ್ತೇವೆ. ಇಡೀ ದೇಶದಲ್ಲಿ ಜಾತಿ ಗಣತಿಯನ್ನ ಜಾರಿ ಮಾಡುತ್ತೇವೆ ಎಂದು ಕಾಂಗ್ರೆಸ್​ ನಾಯಕಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಭರವಸೆ ನೀಡಿದ್ದಾರೆ.

ಅವರು ಇಂದು ಸಂಜೆ ಮಂಗಳವಾರ ಚಿತ್ರದುರ್ಗ ನಗರದ ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಭಾಷಣ ಮಾಡುತ್ತಾ ಅವರು ಹೀಗೆಂದರು…
“ಇಂಡಿಯಾ ಮೈತ್ರಿಕೂಟ ಬಹುಮತ ಪಡೆದು ಅಧಿಕಾರಕ್ಕೆ ಬಂದರೆ ಕಾಡುಗೊಲ್ಲ ಸಮಾಜವನ್ನು ಎಸ್​ಟಿಗೆ ಸೇರಿಸಲಾಗುತ್ತದೆ. ರೈತರಿಗೆ ಬೆಂಬಲ ಬೆಲೆ, ಕೃಷಿಗೆ GST ಮುಕ್ತಗೊಳಿಸ್ತೇವೆ. ಭೂಮಿ‌ ಇಲ್ಲದವರಿಗೆ ಭೂಮಿ ನೀಡುತ್ತೇವೆ. ಬೆಳೆ ನಷ್ಟವಾದವರಿಗೆ 30 ದಿನದಲ್ಲಿ ವಿಮೆ ಹಣ ಕೊಡುತ್ತೇವೆ. ದೇಶದ ಸಂವಿಧಾನ, ರೈತರ ಉಳಿವಿಗೆ ಕಾಂಗ್ರೆಸ್​ ಬೆಂಬಲಿಸಿ ಎಂದು ಕರೆ ನೀಡಿದರು.

ಈಗ ದೇಶದ ದೊಡ್ಡ ನಾಯಕ ಸತ್ಯದ ದಾರಿಯಲ್ಲಿ ನಡೆಯುತ್ತಿಲ್ಲ. ವೈಭೋಗ ತೋರಿಸಿ ಓಡಾಡುತ್ತಿದ್ದಾರೆ, ಅಹಂ ತೋರುತ್ತಿದ್ದಾರೆ. ಸತ್ಯದ ಹಾದಿಯಲ್ಲಿ ನಡೆಯೋದು ಹಿಂದೂ ಧರ್ಮದ ಪರಂಪರೆ. ಶ್ರೀರಾಮ, ಗಾಂಧೀಜಿ, ಇತರೆ ಪ್ರಧಾನಿಗಳು ಸೇವಾಭಾವದಿಂದ ನಡೆದರು. ಈಗ ಮೋದಿ ಸರ್ಕಾರದಲ್ಲಿ ಕೇವಲ ಸುಳ್ಳಿನ ಕಂತೆಯೇ ಇದೆ ಎಂದು ಪ್ರಿಯಾಂಕಾ ಗಾಂಧಿ ಕಿಡಿಕಾರಿದರು.

ತಪ್ಪು ದಾರಿಯಲ್ಲಿ ವಿವಿಧ ರಾಜ್ಯಗಳಲ್ಲಿ ಸರ್ಕಾರಗಳನ್ನು ಬೀಳಿಸುತ್ತಾರೆ. ನೂರಾರು ಕೋಟಿ ರೂ. ಹಣ ನೀಡಿ ಶಾಸಕರನ್ನು ಖರೀದಿ ಮಾಡುತ್ತಾರೆ. ಚುನಾವಣೆ ವೇಳೆ ಅಭಿವೃದ್ಧಿ ವಿಚಾರ ಬಿಟ್ಟು ಜನರ ಭಾವನೆ ಕೆರಳಿಸುತ್ತಾರೆ ಎಂದು ಪ್ರಿಯಾಂಕಾ ಗಾಂಧಿ ಬಿಜೆಪಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

“ಅನೇಕ ಸಲ ಕರ್ನಾಟಕ ಸರ್ಕಾರ ಅನುದಾನವನ್ನ ಕೇಳಿದೆ. ಕೇಂದ್ರದಿಂದ ಈವರೆಗೂ ಒಂದು ಪೈಸೆ ಬಿಡುಗಡೆ ಆಗಿಲ್ಲ. ರಾಯಚೂರು ನಗರದಲ್ಲಿ ಏಮ್ಸ್ ನಿರ್ಮಾಣದ ಕನಸಿದೆ. ಆದರೆ ಈವಗೂ ಆ ಕನಸು ನನಸಾಗಿಲ್ಲ. ಕಳಸಾ ಬಂಡೂರಿ ಯೋಜನೆ ಈವರೆಗೂ ಮಂಜೂರಾಗಿಲ್ಲ. ಭದ್ರಾ ಯೋಜನೆಗೆ ಕೇಂದ್ರ ಸರ್ಕಾರ ಹಣ ಕೊಡಲಿಲ್ಲ. ರಾಜ್ಯದ ತೆರಿಗೆ ಹಣ ಸಹ ನೀಡದೆ ನಷ್ಟವನ್ನ ಮಾಡಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಕೇಂದ್ರದ ಎನ್.ಡಿ.ಎ ಸರ್ಕಾರದ ಧೋರಣೆಯನ್ನು ಕಟುವಾಗಿ ಟೀಕಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಜಾರಿಗೊಳಿಸಿದೆ. ನಿಮ್ಮ ಜೀವನದ ಮೇಲೆ ಪರಿಣಾಮ ಬೀರಿದೆ ಅಲ್ಲವೇ? ಗೃಹಲಕ್ಷ್ಮೀ ಯೋಜನೆಯಿಂದ ಪ್ರತಿ‌ ಮಹಿಳೆಗೆ 2 ಸಾವಿರ ರೂ. ಹಣ, ಉಚಿತ ವಿದ್ಯುತ್, ಅನ್ನಭಾಗ್ಯ, ಶಕ್ತಿ ಯೋಜನೆಯಿಂದ ಉಚಿತ ಪ್ರಯಾಣ, ಯುವನಿಧಿ ಯೋಜನೆ ಜಾರಿ ಮಾಡಲಾಗಿದೆ. ಇನ್ನು ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ಪ್ರತಿ ಕುಟುಂಬದ ಮಹಿಳೆಗೆ 1 ಲಕ್ಷ ರೂ. ಸೇರಿ ಹಲವು ಗ್ಯಾರಂಟಿ ಯೋಜನೆಗಳ ಭರವಸೆ ನೀಡಿದ್ದು, ಇದು ಕೇವಲ ಆರಂಭ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಕಳೆದ 45 ವರ್ಷದಲ್ಲಿ ಇಲ್ಲದ‌ ನಿರುದ್ಯೋಗ ಈಗ ಸೃಷ್ಟಿಯಾಗಿದೆ. 75 ಕೋಟಿ ನಿರುದ್ಯೋಗಿಗಳು, ಕೇಂದ್ರದಲ್ಲಿ 30 ಕೋಟಿ ಕೆಲಸ ಖಾಲಿ ಇವೆ. ವರ್ಷಕ್ಕೆ 2 ಕೋಟಿ ಕೆಲಸ, ರೈತರ ಆದಾಯ ದುಪ್ಪಟ್ಟು ಭರವಸೆ ಹುಸಿ ಆಗಿದೆ. ಬೆಲೆ ಏರಿಕೆ ಎಂಬುದು ದೊಡ್ಡ ಸಮಸ್ಯೆ ಸೃಷ್ಠಿಸಿದೆ. ದುಡಿಮೆ ಮತ್ತು ಖರ್ಚು ತುಂಬಾ ದೊಡ್ಡ ಸಮಸ್ಯೆ ಆಗಿದೆ. ಪೆಟ್ರೋಲ್ 100 ರೂ, ಡೀಸೆಲ್ 90 ರೂ. ದಾಟಿದೆ. ಚಿನ್ನ, ಬೆಳ್ಳಿ ದುಬಾರಿ ಆಗಿದೆ ಎಂದು ಪ್ರಿಯಾಂಕಾ ಗಾಂಧಿ ಅವರು ಮೋದಿ ಸರ್ಕಾರದ ಕ್ರಮಕ್ಕೆ ಕಿಡಿಕಾರಿದರು.


Share It

You cannot copy content of this page