ಬೆಂಗಳೂರು: ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿದ ತಂದೆ ತನ್ನದೇ ಒಂದೂವರೆ ವರ್ಷದ ಮಗುವಿನ ಸಾವಿಗೆ ಕಾರಣವಾದ ಘಟನೆ ರಾಜಧಾನಿಯಲ್ಲಿ ನಡೆದಿದೆ.
ಏ.21 ರಂದು ಎಚ್ಎಸ್ಆರ್ ಲೇಔಟ್ನ ಆಗರದ ಬಳಿ ತಂದೆಯ ಕಾರು ಆಕಸ್ಮಿಕವಾಗಿ ಹರಿದು ಮಗು ಮೃತಪಟ್ಟ ಘಟನೆ ನಡೆದಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ವಿಡಿಯೋ ವೈರಲ್ ಆದ ನಂತರ ಘಟನೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಸಾವಿಗೀಡಾದ ಮಗುವನ್ನು ಒಂದೂವರೆ ವರ್ಷ ವಯಸ್ಸಿನ ಶೈಜಾ ಜನ್ನತ್ ಎನ್ನಲಾಗಿದೆ.
ಚನ್ನಪಟ್ಟಣದಲ್ಲಿ ಸಂಬಂಧಿಕರ ಮದುವೆ ಕಾರ್ಯಕ್ರಮ ಮುಗಿಸಿದ ಕುಟುಂಬ ರಾತ್ರಿ 11:30ರ ಸುಮಾರಿಗೆ ಎಚ್ಎಸ್ಆರ್ ಲೇಔಟ್ನ ಅಗರದ ಬಳಿಯ ತಮ್ಮ ಮನೆಗೆ ವಾಪಸಾಗಿತ್ತು. ಕಾರಿನಿಂದ ಎಲ್ಲರೂ ಇಳಿದ ಬಳಿಕ ಬೇರೆಡೆ ಪಾಕರ್್ ಮಾಡಲು ಮಗುವಿನ ತಂದೆ ಮುಂದಾಗಿದ್ದರು.
ಈ ವೇಳೆ ತಮ್ಮ ಹಿಂದೆಯೇ ಓಡಿ ಬಂದು ಡೋರ್ ಬಳಿ ನಿಂತಿದ್ದ ಮಗುವನ್ನ ಗಮನಿಸದೆ ತಂದೆ ಕಾರ್ ಚಲಾಯಿಸಿದ್ದರು. ಪರಿಣಾಮ ಕಾರು ಹರಿದು ಸ್ಥಳದಲ್ಲಿಯೇ ಮಗು ಸಾವನ್ನಪ್ಪಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯ ಕುರಿತು ಹೆಚ್ಎಸ್ಆರ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ