ಬೆಂಗಳೂರು: ಮಾರ್ಚ್ 1 ರಿಂದ 8 ರವರೆಗೆ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆ ಮಾಡಲಾಗಿದ್ದು, ಸರ್ವಜನಾಂಗದ ಶಾಂತಿಯ ತೋಟ ಎಂಬುದು ಈ ವರ್ಷದ ಥೀಮ್ ಆಗಿರಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆ ಕುರಿತು ನಡೆದ ಪತ್ರಿಕಾಗೋಷ್ಠಿ ಮತ್ತು ಈ ಕುರಿತ ಸಭೆಯ ಮುಖ್ಯಾಂಶಗಳು:
• 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 1ರಿಂದ 8ರ ವರೆಗೆ ನಡೆಯಲಿದೆ.
• ಈ ವರ್ಷದ ಚಲನಚಿತ್ರೋತ್ಸವದ ಥೀಮ್ ʻಸರ್ವ ಜನಾಂಗದ ಶಾಂತಿಯ ತೋಟʼ ಆಯ್ಕೆ ಮಾಡಲಾಗಿದೆ. ಕಳೆದ ವರ್ಷ ʻಸಾಮಾಜಿಕ ನ್ಯಾಯʼ ಥೀಮ್ ನಲ್ಲಿ ಚಲನಚಿತ್ರೋತ್ಸವ ಆಯೋಜಿಸಲಾಗಿತ್ತು.
• 2006ರಲ್ಲಿ ಆರಂಭವಾದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇದೀಗ 16ನೇ ಆವೃತ್ತಿಗೆ ಪ್ರವೇಶಿಸುತ್ತಿದೆ.
• 9ಕೋಟಿ ವೆಚ್ಚದಲ್ಲಿ ಚಲನಚಿತ್ರೋತ್ಸವನ್ನು ಆಯೋಜಿಸಲಾಗುತ್ತಿದೆ.
• ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದ್ದು, ಬೆಂಗಳೂರು ಭಾರತೀಯ ಮತ್ತು ಅಂತಾರಾಷ್ಟ್ರೀಯ ಸಿನೆಮಾ ಸಂಸ್ಕೃತಿಯ ಮುಖ್ಯಕೇಂದ್ರವಾಗಿ ಬೆಳೆದಿದೆ.
• ಚಲನಚಿತ್ರೋತ್ಸವದಲ್ಲಿ ಪ್ರತಿ ವರ್ಷ 60ಕ್ಕೂ ದೇಶಗಳಿಂದ ಬಂದ ಸುಮಾರು 200ಕ್ಕೂ ಅಧಿಕ ಚಲನಚಿತ್ರಗಳನ್ನು, 13 ಚಿತ್ರಮಂದಿರಗಳಲ್ಲಿ, ಸುಮಾರು 400 ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ
• ಪ್ರತಿ ಆವೃತ್ತಿಯಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.