ಬಾರ್ಮರ್(ರಾಜಸ್ಥಾನ): ಜಿಲ್ಲೆಯ ಗಡಿ ಪ್ರದೇಶಗಳಾದ ಚೌಹಾತಾನ್ ಮತ್ತು ಧೋರಿಮಣ್ಣಾ ಭಾಗಗಳಲ್ಲಿ ಕಳೆದ ಭಾನುವಾರ ರಾತ್ರಿ ಭಾರೀ ಪ್ರಮಾಣದ ಸದ್ದಿನೊಂದಿಗೆ ಆಕಾಶದಿಂದ ಉಲ್ಕಾಶಿಲೆಯಂತಹ ನಿಗೂಢ ವಸ್ತು ಬಿದ್ದಿರುವುದಾಗಿ ಸ್ಥಳೀಯರು ಹೇಳಿದ್ದಾರೆ. ಈ ವೇಳೆ ಆಕಾಶದಲ್ಲಿ ವಿಸ್ಮಯ ಎಂಬಂತೆ ಪ್ರಕಾಶಮಾನವಾದ ಬೆಳಕು ಗೋಚರಿಸಿದೆ ಎಂದು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ವಿಚಿತ್ರ ಘಟನೆಯ ಬಗ್ಗೆ ಸ್ಥಳೀಯರು ಪೊಲೀಸರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿರುವ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಆಕಾಶದಿಂದ ಬಿದ್ದಿರುವ ವಸ್ತು ಯಾವುದು? ಯಾವ ಜಾಗದಲ್ಲಿ ಬಿದ್ದಿದೆ? ಎಂಬಿತ್ಯಾದಿ ಮಾಹಿತಿ ಕಲೆಹಾಕುತ್ತಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆ ಸುತ್ತಮುತ್ತಲಿನ ಜನರು ಈ ಗ್ರಾಮಗಳತ್ತ ಧಾವಿಸುತ್ತಿದ್ದಾರೆ.
”ಭಾನುವಾರ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ದೊಡ್ಡ ಶಬ್ದದೊಂದಿಗೆ ಯಾವುದೋ ವಸ್ತು ಆಕಾಶದಿಂದ ಭೂಮಿಗೆ ಬಿದ್ದಿದೆ. ಪರಿಣಾಮ ಕೆಲಕಾಲ ಆಕಾಶದಲ್ಲಿ ಬೆಳಕು ಮೂಡಿತ್ತು. ಆದರೆ, ಅಲ್ಲಿ ಏನಾಯಿತು ಎಂಬುದು ಯಾರಿಗೂ ಗೊತ್ತಾಗಲಿಲ್ಲ. ಸದ್ದು ಕೇಳಿದರೆ ಅದು ಉಲ್ಕಾಶಿಲೆ ಇರಬಹುದೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಇದುವರೆಗೂ ಈ ಪ್ರದೇಶದಲ್ಲೆಲ್ಲೂ ಅಹಿತಕರ ಘಟನೆಯಾಗಲಿ ಅಥವಾ ಯಾವುದೇ ನಷ್ಟ ಸಂಭವಿಸಲಿಲ್ಲ.
ಸ್ಥಳೀಯರು ಹೇಳಿದಂತೆ ಇದೊಂದು ಉಲ್ಕಾಶಿಲೆಯಾಗಿರಬಹುದು ಅಥವಾ ಸಾಮಾನ್ಯ ದೈನಂದಿನ ಖಗೋಳ ವಿದ್ಯಮಾನವೂ ಆಗಿರಬಹುದು. ಆದರೆ, ತನಿಖೆಯ ನಂತರವಷ್ಟೇ ಈ ಬಗ್ಗೆ ನಿಖರ ಮಾಹಿತಿ ಗೊತ್ತಾಗಲಿದೆ. ಆದಾಗ್ಯೂ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ’ ಎಂದು ಚೌಹ್ತಾನ್ ಉಪವಿಭಾಗಾಧಿಕಾರಿ ಸೂರಜ್ಭಾನ್ ವಿಷ್ಣೋಯ್ ತಿಳಿಸಿದ್ದಾರೆ.
ಭಾರತ-ಪಾಕಿಸ್ತಾನ ಗಡಿ ಪ್ರದೇಶ ಇದಾಗಿದ್ದರಿಂದ ಹಲವು ಅನುಮಾನಗಳಿವೆ. ಆದಾಗ್ಯೂ ಭಾನುವಾರ ರಾತ್ರಿ ಇಲ್ಲಿ ಆಕಾಶದಿಂದ ಭೂಮಿಗೆ ಅಪ್ಪಳಿಸುತ್ತಿರುವ ನಿಗೂಢ ವಸ್ತುವಿನ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.