ತೆಹ್ರಾನ್ : ಇರಾನ್‌ನ ಅಬ್ಬಾಸ್ ಬಂದರಿನಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಸುಮಾರು 400 ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಹಲವು ಸಾವಿನ ಶಂಕೆ ವ್ಯಕ್ತವಾಗಿದ್ದು, ದೂರದಿಂದಲೇ ದಟ್ಟ ಹೊಗೆ ಆವರಿಸಿರುವ ಫೋಟೋಗಳು ಇದೀಗ ವೈರಲ್ ಆಗಿವೆ. ಸ್ಟೋಟದ ಶಬ್ದ ಮತ್ತು ಬೆಂಕಿ ಕಾಣಿಸಿಕೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ರಾಜಧಾನಿ ತೆಹ್ರಾನ್‌ನಿಂದ ದಕ್ಷಿಣಕ್ಕೆ 1000 ಕಿ.ಮೀ ದೂರದಲ್ಲಿರುವ ಶಾಹಿದ್ ರಾಜೀ ಬಂದರಿನಲ್ಲಿ ಘಟನೆ ನಡೆದಿದೆ. ಇದು ಇರಾನ್‌ನ ಅತ್ಯಂತ ಮುಂದುವರಿದ ಬಂದರು ಎನಿಸಿಕೊಂಡಿದ್ದು, ಅಬ್ಬಾಸ್ ನಗರದಿಂದ 23 ಕಿ.ಮೀ ದೂರದಲ್ಲಿದೆ. ಈ ಬಂದರು ವಿಶ್ವದ ತೈಲ ಉತ್ಪಾದನೆಯ ಐದನೇ ಒಂದು ಭಾಗದಷ್ಟು ಸರಬರಾಜು ಜಾಲವನ್ನು ಹೊಂದಿದೆ.
ತುರ್ತು ರಕ್ಷಣಾ ತಂಡಗಳನ್ನು ಸ್ಥಳಕ್ಕೆ ಕಳುಹಿಸಿಕೊಡಲಾಗಿದ್ದು, ಗಾಯಾಳುಗಳನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಸಾಗಿಸುವ ಪ್ರಕ್ರಿಯೆ ನಡೆಯುತ್ತಿದೆ. ಘಟನೆಯಲ್ಲಿ ಭಾರತೀಯ ಕಾರ್ಮಿಕರು ಇದ್ದಾರೆ ಎಂಬ ಮಾಹಿತಿಯಿದ್ದು, ಅವರ ಬಗ್ಗೆ ನಿಖರವಾದ ಮಾಹಿತಿಯ ಸಂಗ್ರಹ ಮಾಡಲಾಗುತ್ತಿದೆ.