ಉಪಯುಕ್ತ ಸುದ್ದಿ

ಹಾಸನ ಅತಿಹೆಚ್ಚು ಕೆರೆಗಳನ್ನು ಹೊಂದಿರುವ ಜಿಲ್ಲೆ: ರಾಜ್ಯದ ಎಲ್ಲ ಜಿಲ್ಲೆಗಳ ಕೆರೆಗಳ ಸಮೀಕ್ಷೆ

Share It

4,618 ಕೆರೆಗಳ ಒತ್ತುವರಿ ತೆರವು, 8697 ಎಕರೆ ಭೂಮಿ ವಶಕ್ಕೆ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರಾಜ್ಯದಾದ್ಯಂತ ಜಿಲ್ಲಾ ಪಂಚಾಯತಿಗಳ ಅಧೀನದ ಕೆರೆಗಳನ್ನು ಗುರುತಿಸುವ ಹಾಗೂ ಒತ್ತುವರಿ ತೆರವುಗೊಳಿಸುವ ಕಾರ್ಯ ಚುರುಕುಗೊಳಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯತಿಗಳ ವ್ಯಾಪ್ತಿಗೆ ಬರುವ ಕೆರೆಗಳ ಸಮೀಕ್ಷೆ ಕಾರ್ಯವನ್ನು ಎಲ್ಲಾ ಜಿಲ್ಲೆಗಳಲ್ಲಿ ಕೈಗೊಂಡಿದ್ದು ಒತ್ತುವರಿಯಾಗಿದ್ದ 9,140 ಕೆರೆಗಳನ್ನು ಈಗಾಗಲೆ ಗುರುತಿಸಲಾಗಿದ್ದು, ಈ ಪೈಕಿ 4618 ಕೆರೆಗಳ ಒತ್ತುವರಿ ತೆರವುಗೊಳಿಸಿ ಇಲಾಖೆ ವಶಕ್ಕೆ ಪಡೆಯಲಾಗಿದೆ ಎಂಬ ಮಹತ್ತರ ಮಾಹಿತಿ ಹಂಚಿಕೊಂಡಿದ್ದಾರೆ.

ರಾಜ್ಯದ ಜಿಲ್ಲಾ ಪಂಚಾಯತಿಗಳ ವ್ಯಾಪ್ತಿಯಲ್ಲಿ 32,648 ಕೆರೆಗಳಿದ್ದು, ಇಲಾಖೆ ಕೈಗೊಂಡಿರುವ ಸಮೀಕ್ಷೆಯಲ್ಲಿ 24,497 ಕೆರೆಗಳನ್ನು ಗುರುತಿಸಲಾಗಿದೆ, ಇವುಗಳಲ್ಲಿ 9,140 ಕೆರೆಗಳು ಒತ್ತುವರಿಗೊಂಡಿದ್ದವು ಎಂದು ತಿಳಿಸಿರುವ ಸಚಿವರು ಒತ್ತುವರಿಗೊಂಡ ಕೆರೆಗಳಲ್ಲಿ 4618 ಕೆರೆಗಳ ಒತ್ತುವರಿ ತೆರೆವುಗೊಳಿಸಲಾಗಿದ್ದು, 8697 ಎಕರೆ ಭೂಮಿಯನ್ನು ಜಿಲ್ಲಾ ಪಂಚಾಯತಿಗಳ ವಶಕ್ಕೆ ಪಡೆದುಕೊಳ್ಳಲಾಗಿದೆ, ಒತ್ತುವರಿ ಗುರುತಿಸಲ್ಪಟ್ಟಿರುವ ಉಳಿದ 4,522 ಕೆರೆಗಳನ್ನು ತೆರವುಗೊಳಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಸಚಿವರು ವಿವರ ನೀಡಿದ್ದಾರೆ.

ಒಟ್ಟಾರೆ 32,648 ಕೆರೆಗಳಲ್ಲಿ ಸಮೀಕ್ಷೆ ಬಾಕಿ ಇರುವ 8,151 ಕೆರೆಗಳ ಸಮೀಕ್ಷೆಯನ್ನು ಮುಂದಿನ 30 ದಿನಗಳ ಒಳಗೆ ಮುಗಿಸಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದ್ದು, ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅವರು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ಸಮೀಕ್ಷೆ ಕಾರ್ಯ ಮುಗಿಸಲು ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ.

ಜಿಲ್ಲಾ ಪಂಚಾಯತಿಗಳ ವ್ಯಾಪ್ತಿಗೆ ಬರುವ 32,648 ಕೆರೆಗಳು 3,08,213 ಎಕರೆ ಪ್ರದೇಶವನ್ನು ಹೊಂದಿದೆ, ಇವುಗಳಲ್ಲಿ 2,15,594 ಎಕರೆಗೆ ಸಂಬಂಧಿಸಿ 24,497 ಕೆರೆಗಳ ಸರ್ವೆ ಕಾರ್ಯ ಸಂಪನ್ನಗೊಂಡಿದೆ ಎಂಬ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಹಾಸನ ಜಿಲ್ಲೆ ಅತಿ ಹೆಚ್ಚು 6,367 ಕೆರೆ ಹೊಂದಿದ್ದು, ಬಳ್ಳಾರಿ ಜಿಲ್ಲೆ 21 ಕೆರೆಗಳನ್ನು ಹೊಂದಿದೆ, ಹೆಚ್ಚು ಕೆರೆಗಳನ್ನು ಹೊಂದಿದ ಜಿಲ್ಲೆಗಳಲ್ಲಿ ಶಿವಮೊಗ್ಗ (4354) ಹಾಗೂ ಮೈಸೂರು (2805) ಎರಡು ಹಾಗೂ ಮೂರನೆ ಸ್ಥಾನಗಳಲ್ಲಿವೆ, ಹಾಗೆಯೇ ಅತಿ ಕಡಿಮೆ ಕೆರೆಗಳ ಮುಂದಿನ ಸ್ಥಾನಗಳು ಕಲಬುರಗಿ (33) ಮತ್ತು ಕೊಪ್ಪಳ (39) ಜಿಲ್ಲೆಗಳದು ಎಂಬ ಸಂಗತಿ ಸಮೀಕ್ಷೆಯಿಂದ ತಿಳಿದು ಬಂದಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.


Share It

You cannot copy content of this page