ಬೆಂಗಳೂರು : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಹೊಸ ನೇಮಕಾತಿ ಮೂಲಕ ಆಯ್ಕೆಗೊಂಡ ಚಾಲಕರಿಗೆ ನೇಮಕಾತಿ ಪತ್ರವನ್ನು ಸಚಿವ ರಾಮಲಿಂಗಾ ರೆಡ್ಡಿ ವಿತರಣೆ ಮಾಡಿದರು.
ಶಾಂತಿನಗರದ KSRTC ಕಚೇರಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಸಾಂಕೇತಿಕವಾಗಿ 46 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿದರು. ನಂತರ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಾಣಿಜ್ಯ ಮಳಿಗೆಗಳ ಪರವಾನಗಿ ನಿರ್ವಹಣಾ ತಂತ್ರಾಂಶ ಅನಾವರಣಗೊಳಿಸಿದರು.
ಈ ವೇಳೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಅವರು, 2019 ರಲ್ಲಿ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ದೇಶದಲ್ಲೆಡೆ ಹರಡಿದ ಕೋವಿಡ್-19 ಕಾರಣದಿಂದ ಸ್ಥಗಿತಗೊಂಡಿತ್ತು. ನಂತರ ಹೊಸ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ವಾಕರಸಾ ಸಂಸ್ಥೆಯಲ್ಲಿ 1000 ಚಾಲಕ ಮತ್ತು ಚಾಲಕ ಕಂ ನಿರ್ವಾಹಕ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿ, ಬಹಳ ಯಶಸ್ವಿಯಾಗಿ ಹಾಗೂ ಸಂಪೂರ್ಣ ಪಾರದರ್ಶಕತೆಯಿಂದ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದ್ದೇವೆ ಎಂದು ತಿಳಿಸಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಭರಮಗೌಡ ಕಾಗೆ ಮಾತನಾಡಿ, ಸಂಸ್ಥೆಗೆ ಇನ್ನೂ ಚಾಲನಾ ಸಿಬ್ಬಂದಿಯ ಅವಶ್ಯಕತೆ ಇದೆ. ಹಾಗಾಗಿ ಮತ್ತೋಮ್ಮೆ ಚಾಲನಾ ಸಿಬ್ಬಂದಿ ನೇಮಕಾತಿ ಪ್ರಾರಂಭಿಸಿದರೆ ಪುನಃ ಸಂಸ್ಥೆಗೆ ಖರ್ಚು ವೆಚ್ಚವಾಗುತ್ತದೆ. ಘಟಕಗಳ ಸುಧಾರಣೆ ಮಾಡಬೇಕಾಗಿದೆ. ಅದಕ್ಕಾಗಿ ವಿಶೇಷ ಅನುದಾನವನ್ನು ಸರಕಾರದಿಂದ ದೊರಕಿಸಿ ಕೊಡಬೇಕೆಂದು ಮನವಿ ಮಾಡಿದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಎಮ್.ರವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಪೀರಸಾಬ್ ಕೌತಾಳ, KSRTC ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ,ಭಾಆಸೇ, BMTC ಎಂಡಿ ಆರ್. ರಾಮಚಂದ್ರನ್, ಕಕರಸಾಸಂಸ್ಥೆಯ ಎಂಡಿ ಎಮ್. ರಾಚಪ್ಪ, ಡಾ. ನಂದಿನಿದೇವಿ ಕೆ. ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ), ಇಬ್ರಾಯಿಮ್ ಮೈಗೂರು, ನಿರ್ದೇಶಕರು (ಮಾಹಿತಿ ಮತ್ತು ತಂತ್ರಜ್ಞಾನ) ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.