ಹೈದರಾಬಾದ್(ತೆಲಂಗಾಣ): ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದು,ನಟ ಅಲ್ಲು ಅರ್ಜುನ್ ಸೇರಿ ಒಟ್ಟು 23 ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗಿದೆ.
2024 ಡಿಸೆಂಬರ್ 4 ರಂದು ರಾತ್ರಿ 9.30ರ ವೇಳೆ ಪುಷ್ಪ-2 ಬೆನಿಫಿಟ್ ಶೋಗಾಗಿ ಹೈದರಾಬಾದ್‌ನ ಆರ್‌ಟಿಸಿ ಕ್ರಾಸ್‌ರೋಡ್ಸ್‌ನಲ್ಲಿರುವ ಸಂಧ್ಯಾ ಥಿಯೇಟರ್‌ಗೆ ಆಗಮಿಸಿದ್ದ ಚಿತ್ರದ ನಾಯಕ ಅಲ್ಲು ಅರ್ಜುನ್ ಅವರನ್ನು ನೋಡಲು ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಧಾವಿಸಿದಾಗ ಕಾಲ್ತುಳಿತ ಉಂಟಾಗಿತ್ತು.
ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದಾಗ, ರೇವತಿ (35) ಎಂಬ ಮಹಿಳೆ ಮತ್ತು ಅವರ ಪುತ್ರ ಶ್ರೀತೇಜ (9) ಕೆಳಗೆ ಬಿದ್ದು ಕಾಲ್ತುಳಿತಕ್ಕೊಳಗಾಗಿ, ಗಂಭೀರ ಗಾಯಗೊಂಡು ಪ್ರಜ್ಞೆ ಕಳೆದುಕೊಂಡಿದ್ದರು. ಪೊಲೀಸರು ತಕ್ಷಣ ಅವರಿಗೆ ಸಿಪಿಆರ್ ಮಾಡಿದ್ದರು. ನಂತರ ಅವರನ್ನು ಆರ್‌ಟಿಸಿ ಕ್ರಾಸ್‌ರೋಡ್ಸ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರೇವತಿ ಮೃತಪಟ್ಟಿದ್ದರು. ಶ್ರೀತೇಜ ಸ್ಥಿತಿ ಗಂಭೀರವಾಗಿದ್ದರಿಂದ ನಿಮ್ಸ್ಗೆ ರವಾನಿಸಲಾಗಿತ್ತು.
ಪ್ರಕರಣದಲ್ಲಿ ಪೊಲೀಸರು, ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಳಿಕ ಬಂಧಿಸಿದ್ದರು. ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ ನಂತರ ಮರುದಿನ ಬೆಳಗ್ಗೆ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಬಳಿಕ ನಾಂಪಲ್ಲಿ ನ್ಯಾಯಾಲಯವು 14 ದಿನಗಳ ರಿಮಾಂಡ್ ವಿಧಿಸಿತ್ತು, ಅದು 2024 ಡಿಸೆಂಬರ್ 27 ರಂದು ಕೊನೆಗೊಂಡಿತ್ತು. ಅದೇ ದಿನ ವರ್ಚುವಲ್ ಆಗಿ ವಿಚಾರಣೆಗೆ ಹಾಜರಾಗಿದ್ದರು.
ನಂತರ ಅವರ ಪರ ವಕೀಲರು ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ನಾಂಪಲ್ಲಿ ನ್ಯಾಯಾಲಯವು ಅಲ್ಲು ಅರ್ಜುನ್ ಅವರಿಗೆ ರೆಗ್ಯೂಲರ್ ಬೇಲ್ ಮಂಜೂರು ಮಾಡಿತ್ತು. ರೆಗ್ಯೂಲರ್ ಬೇಲ್ ಮೇಲಿನ ವಾದ ಪ್ರತಿವಾದಗಳು ಮುಗಿದ ನಂತರ ನ್ಯಾಯಾಲಯವು ತನ್ನ ತೀರ್ಪು ನೀಡಿತ್ತು.

