ಚಿತ್ರದುರ್ಗ: ಚಿತ್ರದುರ್ಗದ ಬಸ್ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳನ್ನು ಇನ್ನೂ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಚಿತ್ರದುರ್ಗದ ಬಳಿ ನಡೆದ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿದ್ದರು. ಅದರಲ್ಲಿ ನಾಲ್ವರ ದೇಹಗಳು ಸುಟ್ಟು ಕರಕಲಾಗಿದ್ದು, ಗುರುತಿಸಲು ಸಾಧ್ಯವಾಗಿರಲಿಲ್ಲ. ನಾಲ್ವರು ಯುವತಿಯರೇ ಆಗಿದ್ದು, ಅವರ ಮೃತದೇಹಗಳನ್ನು ಗುರಿತಿಸಲು ಕುಟುಂಬಸ್ಥರು ಗೊಂದಲಕ್ಕೀಡಾದರು.
ಈ ಹಿನ್ನೆಲೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ, ಡಿಎನ್ಎ ಪರೀಕ್ಷೆಗಾಗಿ ಮಾದರಿ ಸಂಗ್ರಹಿಸಿ ಎಫ್ ಎಸ್ ಎಲ್ ಗೆ ಕಳುಹಿಸಿಕೊಡಲಾಗಿದೆ. ವರದಿ ಬರಲು ಮೂರು ದಿನವಾಗುತ್ತದೆ ಎಂಬ ಕಾರಣಕ್ಕೆ ಇನ್ನೂ ಮೃತದೇಹಗಳ ಹಸ್ತಾಂತರವಾಗಿಲ್ಲ ಎನ್ನಲಾಗಿದೆ.
ಮೃತದೇಹಗಳು ಇನ್ನೂ ಹಸ್ತಾಂತರವಾಗದ ಕಾರಣಕ್ಕೆ ಕುಟುಂಬಸ್ಥರು ಚಿತ್ರದುರ್ಗದಲ್ಲಿಯೇ ಬೀಡುಬಿಟ್ಟಿದ್ದಾರೆ. ಮೃತದೇಹಗಳು ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿಯೇ ಇದ್ದು, ಕುಟುಂಬಸ್ಥರ ದುಃಖವನ್ನು ಮತ್ತಷ್ಟು ಹೆಚ್ಚಿಸಿದೆ.

