ಬೆಂಗಳೂರು: ಅಕ್ರಮವಾಗಿ ನಡೆಯುತ್ತಿರುವ ಕ್ವಾರಿಯಲ್ಲಿ ಬಂಡೆ ಬ್ಲಾಸ್ಟ್ ಮಾಡಿದ ಪರಿಣಾಮ ನಾಲ್ಕು ಚಿರತೆಗಳು ಮೃತಪಟ್ಟಿವೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿನ ಯಶವಂತಪುರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಚಿಕ್ಕನಹಳ್ಳಿ ಬಳಿ ಘಟನೆ ನಡೆದಿದೆ. ಈ ವ್ಯಾಪ್ತಿಯಲ್ಲಿ ಬರುವ ಬಂಡೆಯನ್ನು ಅಕ್ರಮವಾಗಿ ಬ್ಲಾಸ್ಟ್ ಮಾಡಲಾಗಿದ್ದು, ಇದರಿಂದಾಗಿ ಚಿರತೆಗಳು ಸಾವನ್ನಪ್ಪಿವೆ ಎಂದು ಹೇಳಲಾಗಿದೆ.
ಕ್ವಾರಿಯವರು ಬಂಡೆ ಬ್ಲಾಸ್ಟ್ ಮಾಡಿದ್ದಾರೆ. ಇದು ಅರಣ್ಯದ ವ್ಯಾಪ್ತಿಗೆ ಬರುವುದಿಲ್ಲ. ಈ ಬಗ್ಗೆ ಅಧಿಕಾರಿಗಳು ನನಗೆ ಮಾಹಿತಿ ನೀಡಿದ್ದು, ಚಿರತೆಯೊಂದು ಮೃತಪಟ್ಟಿದೆ ಎಂದು ಹೇಳಲಾಗಿದೆ. ಶವಪರೀಕ್ಷೆ ವೇಳೆ ಚಿರತೆ ಹೊಟ್ಟೆಯಲ್ಲಿ ಮರಿ ಇತ್ತು ಎನ್ನಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕ್ವಾರಿ ಮಾಲೀಕರು ಮತ್ತು ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

