ಚಿಕ್ಕಮಗಳೂರು: ಮದ್ಯದ ಅಮಲಿನಲ್ಲಿತಂದೆಯೇ ಮಗನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದಡ.
ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಆನೆಗುಂಡಿ ಗ್ರಾಮದಲ್ಲಿ ನಡೆದಿದ್ದು, ಪ್ರದೀಪ್ ಆಚಾರ್ ಕೊಲೆಯಾದ ವ್ಯಕ್ತಿ. ಆತನ ತಂದೆ ರಮೇಶ್ ಆಚಾರ್ ಎಂಬಾತನೇ ಕೊಲೆ ಮಾಡಿದವನು. ಮದ್ಯದ ಅಮಲಿನಲ್ಲಿದ್ದ ರಮೇಶ್ ಆಚಾರ್ ತನ್ನ ಮಗ ಪ್ರದೀಪ್ನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ಪ್ರದೀಪ್ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಬಳಿಕ ಮಗನ ಮೃತದೇಹವನ್ನು ಹಾಲ್ನಿಂದ ಹೊರಾಂಗಣಕ್ಕೆ ತಂದಾಗ ಅಕ್ಕ ಪಕ್ಕದವರು ಆಘಾತಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಮದ್ಯಪಾನ ಮಾಡಿ ಆಗಾಗ ಮನೆಯಲ್ಲೇ ತಂದೆ ಮತ್ತು ಮಗ ಗಲಾಟೆ ಮಾಡುತ್ತಿದ್ದರು. ಒಮ್ಮೊಮ್ಮೆ ಜಗಳ ಅತಿರೇಕಕ್ಕೆ ಹೋಗುತ್ತಿತ್ತು. ಇವರ ಕಾಟದಿಂದ ಬೇಸತ್ತ ಪ್ರದೀಪ್ ತಾಯಿ ಮನೆ ಬಿಟ್ಟು ಹೋಗಿದ್ದರು. ನಂತರ ಮನೆಯಲ್ಲಿ ತಂದೆ–ಮಗ ಇಬ್ಬರೇ ವಾಸವಿದ್ದರು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೀತೇಂದ್ರ ಕುಮಾರ್ ದಯಾಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

