ರಾಜಕೀಯ ಸುದ್ದಿ

RSS ನೋಟೀಸ್‌ಗೆ ಪ್ರಿಯಾಂಕ್ ಖರ್ಗೆ ತೀಕ್ಷ್ಣ ಪ್ರತಿಕ್ರಿಯೆ: ಬೆದರಿಕೆಗೆ ಮಣಿಯಲ್ಲ ಎಂದ ಸಚಿವ

Share It

ಬೆಂಗಳೂರು: ಆರ್‌ಎಸ್‌ಎಸ್‌ ವಿರುದ್ಧ ಪದೇಪದೇ ಟೀಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ನೋಟೀಸ್‌ ಜಾರಿ ಮಾಡಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಇಂತಹ ಬೆದರಿಕೆಗಳು ನನ್ನ ನಿಲುವನ್ನು ಬದಲಾಯಿಸುವುದಿಲ್ಲ ಎಂದರು. ಆರ್‌ಎಸ್‌ಎಸ್‌ ನೋಂದಣಿ ಮಾಡದ ಸಂಘಟನೆ ಆಗಿರುವುದು ಸಾರ್ವಜನಿಕ ಚರ್ಚೆಗೆ ವಿಷಯವಾಗಬೇಕು ಎಂದು ಹೇಳಿದರು.

ಇದೇ ವೇಳೆ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಮಾನ ಮಟ್ಟದ ಭದ್ರತೆ ಏಕೆ ಒದಗಿಸಲಾಗಿದೆ ಎಂಬುದರ ಕುರಿತು ಪ್ರಶ್ನಿಸಿದ ಅವರು, ಅವರಿಗೆ ಎದುರಾಗಿರುವ ಭದ್ರತಾ ಅಪಾಯಗಳ ಬಗ್ಗೆ ಜನರಿಗೆ ಸ್ಪಷ್ಟತೆ ಬೇಕು ಎಂದು ಆಗ್ರಹಿಸಿದರು.

ಮುಂದಿನ ಸಿಎಂ ನಿರ್ಧಾರ ಹೈಕಮಾಂಡ್ ಕೈಯಲ್ಲೇ: ಸಿಎಂ ಸಿದ್ದರಾಮಯ್ಯ ಅವರು ಪೂರ್ಣಾವಧಿ ಮುಖ್ಯಮಂತ್ರಿಯಾಗಿರುವ ಬಗ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಅವರು ಈಗಾಗಲೇ ಸ್ಪಷ್ಟನೆ ನೀಡಿರುವಾಗ ಮತ್ತಷ್ಟು ಪ್ರಶ್ನೆಗಳಿಗೆ ಅರ್ಥವಿಲ್ಲ ಎಂದರು. ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಯಾರು ಎನ್ನುವುದನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಹೇಳಿದರು.

ಕಾಂಗ್ರೆಸ್‌ ಪಕ್ಷ ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕೊಂಡೊಯ್ಯುವ ರಾಜಕೀಯ ಶಕ್ತಿಯಾಗಿದೆ ಎಂದು ವಿವರಿಸಿದ ಅವರು, ನಾಯಕತ್ವ ಮತ್ತು ಅಭಿವೃದ್ಧಿ ಎಂದಿಗೂ ಸ್ಥಿರವಾಗಿರುವುದಿಲ್ಲ ಎಂದು ಅಭಿಪ್ರಾಯಪಟ್ಟರು. ದೇವರಾಜ ಅರಸು ಕಾಲದಿಂದ ಸಿದ್ದರಾಮಯ್ಯವರೆಗೂ ಈ ಪರಂಪರೆ ಮುಂದುವರೆದಿದೆ ಎಂದು ಹೇಳಿದರು. ನೆಹರು–ಗಾಂಧಿ ತತ್ವಗಳನ್ನು ರಾಹುಲ್ ಗಾಂಧಿ ಮುಂದುವರೆಸಿಕೊಂಡು ಹೋಗುತ್ತಿರುವುದನ್ನೂ ಅವರು ಉಲ್ಲೇಖಿಸಿದರು.

ನಾಯಕತ್ವ ಪಕ್ಷಕ್ಕಿಂತ ದೊಡ್ಡದಲ್ಲ: ನಾಯಕತ್ವ ಬದಲಾವಣೆ ವಿಚಾರದಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಹೈಕಮಾಂಡ್ ಮುಂದಿನ ಪೀಳಿಗೆಯ ನಾಯಕರನ್ನು ಬೆಳೆಸುತ್ತಿದೆ ಎಂದರು. “ನನ್ನಿಂದಲೇ ಪಕ್ಷ” ಎಂಬ ಭಾವನೆ ಯಾರಿಗಾದರೂ ಇದ್ದರೆ ಅದು ತಪ್ಪು ಕಲ್ಪನೆ. ಕಾರ್ಯಕರ್ತರು ಇಲ್ಲದೆ ಯಾವುದೇ ನಾಯಕತ್ವ ಇರಲಾರದು ಎಂದು ಹೇಳಿದರು.

ಕೆ.ಎನ್. ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ: ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು “ಸಿದ್ದರಾಮಯ್ಯ ಇದ್ದರೆ ಕಾಂಗ್ರೆಸ್” ಎಂದು ಹೇಳಿದ್ದಕ್ಕೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ, ಇಂತಹ ಹೇಳಿಕೆಗಳು ಬೇಡವೆಂದರು. ಟಿಕೆಟ್ ಅಥವಾ ಅಧಿಕಾರ ಬೇಕಾದಾಗ ಪಕ್ಷ ನೆನಪಾಗುತ್ತದೆ, ಅಧಿಕಾರದಲ್ಲಿರುವಾಗ ಪಕ್ಷವನ್ನು ಮರೆತರೆ ಸರಿಯಲ್ಲ ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ ಪಕ್ಷ ಒಬ್ಬ ವ್ಯಕ್ತಿಯಿಂದಲ್ಲ, ಎಲ್ಲರ ಶ್ರಮದಿಂದ ಬೆಳೆದಿರುವ ಸಂಘಟನೆ ಎಂಬುದನ್ನು ಎಲ್ಲರೂ ಅರಿಯಬೇಕು ಎಂದು ಹೇಳಿದರು.


Share It

You cannot copy content of this page