ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಬೋಧಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿ ಮಹತ್ವದ ಕರಡು ಅಧಿಸೂಚನೆ ಪ್ರಕಟಿಸಿದೆ.
ಭಾರತೀಯ ಸಂವಿಧಾನದ ಅನುಚ್ಛೇದ 371(ಜೆ) ಮತ್ತು ಕರ್ನಾಟಕ ಸಾರ್ವಜನಿಕ ಉದ್ಯೋಗ (ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ, 2013ರ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಇದರ ಮೂಲಕ ವಿಶ್ವವಿದ್ಯಾಲಯದ ಬೋಧಕ ಹುದ್ದೆಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ಅಭ್ಯರ್ಥಿಗಳಿಗೆ ಶೇ. 75 ರಷ್ಟು ಮೀಸಲಾತಿ ನೀಡಲು ಪ್ರಸ್ತಾವಿಸಲಾಗಿದೆ.
ಈ ಕರಡು ಅಧಿಸೂಚನೆ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅನ್ವಯವಾಗುತ್ತದೆ. ಒಟ್ಟು 139 ಬೋಧಕ ಹುದ್ದೆಗಳು ಲಭ್ಯವಿದ್ದು, ಅವುಗಳಲ್ಲಿ 105 ಹುದ್ದೆಗಳು ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಮೀಸಲಾಗಿವೆ. ಉಳಿದ 34 ಹುದ್ದೆಗಳು ಇತರ ಅಭ್ಯರ್ಥಿಗಳಿಗೆ ತೆರೆಯಲ್ಪಟ್ಟಿವೆ.
ಪ್ರಾಧ್ಯಾಪಕರಿಗೆ 21 ಸ್ಥಾನಗಳಿದ್ದು, ಈ ಹುದ್ದೆಗೆ ರೂ. 1,44,200 ರಿಂದ ರೂ. 2,18,200 ವರೆಗೆ ವೇತನ ನಿಗದಿಯಾಗಿದೆ. ಸಹ ಪ್ರಾಧ್ಯಾಪಕರಿಗೆ 40 ಹುದ್ದೆಗಳು ಲಭ್ಯವಿದ್ದು, ವೇತನ ಶ್ರೇಣಿ ರೂ. 1,31,400 ರಿಂದ ರೂ. 2,17,100 ಆಗಿದೆ. ಸಹಾಯಕ ಪ್ರಾಧ್ಯಾಪಕರ ವಿಭಾಗದಲ್ಲಿ 78 ಹುದ್ದೆಗಳಿದ್ದು, ರೂ. 57,700 ರಿಂದ ರೂ. 1,82,400 ವರೆಗೆ ವೇತನ ಸಿಗಲಿದೆ. ಈ ಎಲ್ಲಾ ವರ್ಗಗಳ ಹೆಚ್ಚಿನ ಹುದ್ದೆಗಳು ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಮೀಸಲಾಗಿವೆ.
ಕರಡು ಅಧಿಸೂಚನೆಗೆ ಸಂಬಂಧಿಸಿ ಸಾರ್ವಜನಿಕರಿಂದ ಆಕ್ಷೇಪಣೆಗಳು ಅಥವಾ ಸಲಹೆಗಳಿದ್ದಲ್ಲಿ, ಅಧಿಸೂಚನೆ ಪ್ರಕಟವಾದ ದಿನಾಂಕದಿಂದ 15 ದಿನಗಳೊಳಗೆ ಲಿಖಿತ ರೂಪದಲ್ಲಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿಗಳನ್ನು ಕುಲಸಚಿವರು, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಜ್ಞಾನ ಸಾಗರ ಆವರಣ, ವಿನಾಯಕ ನಗರ, ಕಂಟೋನ್ಮೆಂಟ್, ಬಳ್ಳಾರಿ – 583105 ಎಂಬ ವಿಳಾಸಕ್ಕೆ ಕಳುಹಿಸಬೇಕು.
ಕಲ್ಯಾಣ ಕರ್ನಾಟಕ ಪ್ರದೇಶದ ಯುವಕರಿಗೆ ಸರ್ಕಾರಿ ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ವಿಸ್ತರಿಸುವ ಉದ್ದೇಶ ಹೊಂದಿದ್ದು, ಬೋಧನಾ ವೃತ್ತಿಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ಅಧಿಕೃತ ಅಧಿಸೂಚನೆ ಪರಿಶೀಲಿಸುವಂತೆ ಸೂಚಿಸಲಾಗಿದೆ.

