ಅಪರಾಧ ಸುದ್ದಿ

ಅಪ್ರಾಪ್ತೆಯ ಅತ್ಯಾಚಾರ ಮಾಡಿ, ಕೊಲೆ ಮಾಡಿದವರಿಗೆ ಶಿಕ್ಷೆ ಕಡಿಮೆ ಮಾಡಿದರೆ ಕೃತ್ಯವನ್ನು ಪ್ರೋತ್ಸಾಹಿಸಿದಂತೆ ಎಂದ ಹೈಕೋರ್ಟ್

Share It

ಬೆಂಗಳೂರು: ಅಪ್ರಾಪ್ತೆಯನ್ನು ಸಾಮೂಹಿಕ ಅತ್ಯಾಚಾರವೆಸಗಿದ್ದಲ್ಲದೆ, ಕತ್ತು ಹಿಸುಕಿ ಕೊಲೆ ಮಾಡಿದ ಅಪರಾಧಿಗಳ ಶಿಕ್ಷೆ ಪ್ರಮಾಣ ಕಡಿಮೆ ಮಾಡಿದರೆ ಅಂತಹ ಕೃತ್ಯಗಳನ್ನು ಪ್ರೋತ್ಸಾಹಿಸಿದಂತಾಗಲಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಇಂತಹ ಆದೇಶಗಳು ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗಬಹುದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅಪ್ರಾಪ್ತೆಯನ್ನು ಅತ್ಯಾಚಾರವೆಸಗಿ, ಕೊಲೆ ಮಾಡಿದ ಮೂವರು ಅಪರಾಧಿಗಳಿಗೆ ವಿಧಿಸಿದ್ದ ಗಲ್ಲು ಶಿಕ್ಷೆ ದೃಢೀಕರಿಸಿ, ವಿಚಾರಣಾ ನ್ಯಾಯಾಲಯ  ಅಪರಾಧಿಗಳಾದ ಮಧ್ಯಪ್ರದೇಶದ ಜೈಬನ್ ಆದಿವಾಸಿ, ಮುಖೇಶ್ ಸಿಂಗ್ ಮತ್ತು ಜಾರ್ಖಂಡ್​ನ ಮನೀಶ್ ತಿರ್ಕಿ ಎಂಬವವರಿಗೆ ನೀಡಿದ್ದ ಶಿಕ್ಷೆಯನ್ನು ದೃಢೀಕರಿಸಿದೆ.

ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಮತ್ತು ನ್ಯಾಯಮೂರ್ತಿ ವೆಂಟಕೇಶ್ ಟಿ.ನಾಯ್ಕ್ ಅವರ ನ್ಯಾಯಪೀಠ, ವಿಚಾರಣಾ ನ್ಯಾಯಾಲಯ ವಿಧಿಸಿರುವ ಗಲ್ಲು ಶಿಕ್ಷೆ ಖಾಯಂಗೊಳಿಸಿ, ಶಿಕ್ಷೆ ರದ್ದು ಕೋರಿ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿದೆ.

ಅಪರಾಧಿಗಳು ಅಪ್ರಾಪ್ತೆ ಜೀವವನ್ನು ಲೆಕ್ಕಿಸದೇ ನಿರಂತರವಾಗಿ ಒಬ್ಬರ ಬಳಿಕ ಮತ್ತೊಬ್ಬರು ಅತ್ಯಾಚಾರವೆಸಗಿದ್ದು, ಇದೊಂದು ಇಡೀ ಸಮಾಜದ ವಿರುದ್ಧದ ಅಪರಾಧ ಕೃತ್ಯವಾಗಿದೆ. ಅಂತಹ ಆರೋಪಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿದರೆ, ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದಂತಾಗಲಿದೆ. ಬಾಲಕಿಯನ್ನು ಕಾಮುಕ ಕೃತ್ಯಕ್ಕೆ ಬಳಸಿರುವುದನ್ನು ಪ್ರೋತ್ಸಾಹಿಸಿದಂತಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.

ಸಂತ್ರಸ್ತೆ 7 ವರ್ಷ ಏಳು ತಿಂಗಳು ವಯಸ್ಸಿನವರಾಗಿದ್ದು ಆರೋಪಿಗಳ ಮೇಲೆ ನಂಬಿಕೆಯಿಟ್ಟಿದ್ದಳು. ಅದೇ ಕಾರಣದಿಂದ ಆಕೆಗೆ ತಿಂಡಿ ಕೊಡಿಸುವ ನೆಪದಲ್ಲಿ ಕರೆದು ಅಪ್ರಾಪ್ತೆ ಜೀವವನ್ನು ಲೆಕ್ಕಿಸದೇ, ತಮ್ಮ ಕಾಮತೃಷೆ ತೀರಿಸಿಕೊಂಡಿದ್ದಾರೆ. ಇದರಿಂದ ಸಂತ್ರಸ್ತೆ ಖಾಸಗಿ ಭಾಗದಲ್ಲಿ ಗಾಯವಾಗಿರುವ ಅಂಶ ವೈದ್ಯಕೀಯ ವರದಿಯಲ್ಲಿ ಗೊತ್ತಾಗಿದೆ. ಇಷ್ಟಾದರೂ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಸಂತ್ರಸ್ತೆಯ ಮೃತದೇಹವನ್ನು ಚರಂಡಿಗೆ ಎಸೆದಿದ್ದಾರೆ. ಈ ಘಟನೆ ಕೇವಲ ನ್ಯಾಯಾಂಗದ ಅತ್ಮಸಾಕ್ಷಿಗೆ ಮಾತ್ರವಲ್ಲದೇ, ಇಡೀ ಸಮಾಜದ ಆತ್ಮಸಾಕ್ಷಿಗೆ ಆಘಾತನ್ನುಂಟು ಮಾಡಿದೆ ಎಂದು ಆದೇಶದಲ್ಲಿ ಹೇಳಿದೆ.

ಮಂಗಳೂರಿನ ವಾಮಂಜೂರು ಬಳಿ ಟೈಲ್ಸ್ ಕಾರ್ಖಾನೆಯಲ್ಲಿ ಮೂವರು ಆರೋಪಿಗಳು ಕಾರ್ಮಿಕರಾಗಿದ್ದರು. ಅದೇ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಿಳೆಯ 8 ವರ್ಷದ ಅಪ್ರಾಪ್ತ ಪುತ್ರಿಯನ್ನು 2021ರ ನವೆಂಬರ್ 21ರ ಭಾನುವಾರ ಚಿಕ್ಕಿ ಕೊಡಿಸುವುದಾಗಿ ನಂಬಿಸಿ ಆರೋಪಿ ಮನೀಶ್ ತಿರ್ಕಿ ಕೊಠಡಿಗೆ ಕರೆದೊಯ್ದಿದ್ದ. ಸಂತ್ರಸ್ತೆ ಮೇಲೆ ಒಬ್ಬ ಅರೋಪಿ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದರೆ, ಇತರೆ ಆರೋಪಿಗಳು ಅತ್ಯಾಚಾರ ಎಸಗಿದ್ದರು.

ಇದರಿಂದ ಸಂತ್ರಸ್ತೆಯ ಖಾಸಗಿ ಭಾಗಗಳಲ್ಲಿ ರಕ್ತಸ್ರಾವವಾಗುತ್ತಿತ್ತು. ನೋವಿನಿಂದ ಅಳುತ್ತಿದ್ದರು. ಈ ಸಂದರ್ಭದಲ್ಲಿ ಮೊದಲ ಆರೋಪಿ ಕುತ್ತಿಗೆ ಹಿಡಿದು ಸಂತ್ರಸ್ತೆಯನ್ನು ಸಾಯಿಸಿದ್ದ. ಬಳಿಕ ಸಾಕ್ಷಿಗಳನ್ನು ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಚರಂಡಿಗೆ ಎಸೆದಿದ್ದರು.

ಮೃತದೇಹ ಪತ್ತೆಯಾದ ಬಳಿಕ ಸಂತ್ರಸ್ತೆ ತಾಯಿ ಪೊಲೀಸರಿಗೆ ದೂರು ದಾಖಲಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು, ಸಿಸಿ ಕ್ಯಾಮೆರಾ ದೃಶ್ಯಗಳು, ಎಫ್ಎಸ್ಎಲ್ ವರದಿ ಸೇರಿ ಸಾಕ್ಯಾಧಾರಗಳನ್ನು ಸಂಗ್ರಹಿಸಿ, ಅಪರಾಧಿಗಳ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಜತೆಗೆ, ತಲಾ 40 ಸಾವಿರ ರೂ. ದಂಡ ವಿಧಿಸಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.


Share It

You cannot copy content of this page