ಮುನಿರಾಬಾದ್: ಪಾರ್ಟಿಯೊಂದರಲ್ಲಿ ಸ್ಪಿರಿಟ್ ಕುಡಿದು ಅಸ್ವಸ್ಥಗೊಂಡಿದ್ದ ನಾಲ್ವರು ಯುವಕರ ಪೈಕಿ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಯುವಕರು ಸಾವು ಬದುಕಿನ ಮಧ್ಯೆ ನರಳಾಡುತ್ತಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಕೂಕನಪಳ್ಳಿ ಗ್ರಾಮದ ರಮೇಶ್ ಹೊಸಹಳ್ಳಿ, ಅಮರೇಶ್ ಹಿರೇಮಠ ಮೃತ ಯುವಕರಾಗಿದ್ದು, ಇನ್ನಿಬ್ಬರು ಯುವಕರು ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದಾರೆ.
ಫೆ. ರಂದು ಗ್ರಾಮದ ಹೊರವಲಯದಲ್ಲಿ ನಡೆದ ಪಾರ್ಟಿಯಲ್ಲಿ ಸ್ಪಿರಿಟ್ ಕುಡಿದಿದ್ದ ನಾಲ್ವರು ಸ್ನೇಹಿತರು ಅಸ್ವಸ್ಥಗೊಂಡಿದ್ದರು. ಇವರೆಲ್ಲರನ್ನೂ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇವರ ಪೈಕಿ ಕಿಮ್ಸ್‌ನಲ್ಲಿ ಓರ್ವ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಒಬ್ಬ ಯುವಕ ಸಾವನ್ನಪ್ಪಿದ್ದಾನೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮುನಿರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

