ಬೆಂಗಳೂರು: ಮೆಟ್ರೋ ದರ ಏರಿಕೆಗೂ ರಾಜ್ಯಕ್ಕೂ ಯಾವುದೇ ಸಂಬಂಧವಿಲ್ಲ. ಕೇಂದ್ರ ಸರಕಾರವೇ ನೇಮಿಸಿದ ಅಧಿಕಾರಿಗಳು ಬೆಲೆ ನಿಗದಿ ಸಮಿತಿಯಲ್ಲಿರುತ್ತಾರೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಬಿಎಂಟಿಸಿಯಲ್ಲಿ ನಿತ್ಯ 45 ಲಕ್ಷ ಜನ ಓಡಾಡುತ್ತಾರೆ. ಮೆಟ್ರೋ ತಂದ ಉದ್ದೇಶವೇ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದಾಗಿತ್ತು. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಶಂಕುಸ್ಥಾಪನೆ ಆಗಿ, ಕಾಲಕಾಲಕ್ಕೆ ಮೆಟ್ರೋ ಕಾಮಗಾರಿ ನಡೆಯುತ್ತಾ ಬಂದಿದೆ. ದೇಶದ ಅನೇಕ ನಗರಗಳಲ್ಲಿ ಮೆಟ್ರೋ ಇದ್ದು, ಕೇಂದ್ರ ಸರಕಾರದ ನಗರಾಭಿವೃದ್ಧಿ ಇಲಾಖೆಯ ಅಧೀನದಲ್ಲಿದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೆಟ್ರೋ ನಿಗಮಗಳ ಅಧ್ಯಕ್ಷರಾಗಿರುತ್ತಾರೆ ಎಂದು ಸಚಿವರು ತಿಳಿಸಿದರು.
ಪ್ರಯಾಣ ದರ ಏರಿಕೆ ಸಂಬಂಧ ಕೇಂದ್ರ ಸರಕಾರದಿಂದಲೇ ಸಮಿತಿ ರಚನೆ ಮಾಡಲಾಗಿದೆ. ರಾಜ್ಯದ ಮೆಟ್ರೋ ನಿಗಮದ ಬೆಲೆ ಏರಿಕೆ ಸಮಿತಿಗೆ ಜಸ್ಟೀಸ್ ತಾರಿಣಿ ಎಂಬುವವರು ಅಧ್ಯಕ್ಷರಾಗಿದ್ದಾರೆ. ಸತ್ಯೇಂದ್ರ ಪಾಲ್ ಸಿಂಗ್ ಎಂಬ ಕೇಂದ್ರದ ಹಿರಿಯ ಅಧಿಕಾರಿ ಸದಸ್ಯರಾಗಿದ್ದರೆ, ಕರ್ನಾಟಕ ರಾಜ್ಯ ಸರಕಾರದ ಶಿಫಾರಸಿನ ಆಧಾರದಲ್ಲಿ ರಮಣರೆಡ್ಡಿ ಎಂಬ ನಿವೃತ್ತ ಐಎಎಸ್ ಅಧಿಕಾರಿಯನ್ನು ನೇಮಿಸಲಾಗಿದೆ. ಈ ಸಮಿತಿಯೇ ದರ ಏರಿಕೆ ನಿರ್ಧರಿಸುತ್ತದೆ ಎಂದಿದ್ದಾರೆ.
ಈ ಸಮಿತಿ ಮೆಟ್ರೋ ದರ ಏರಿಕೆಗೆ ಕಾರಣಗಳು, ವೆಚ್ಚಗಳು ಸೇರಿ ವಿವಿಧ ಅಂಶಗಳನ್ನು ಪರಿಗಣಿಸಿ ದರ ನಿಗದಿ ಮಾಡಲಾಗುತ್ತದೆ. ಮೆಟ್ರೋ ನಿರ್ಮಾಣದಲ್ಲಿ ಬಿಜೆಪಿ ಅವರ ಸಾಧನೆ ಏನಿಲ್ಲ. ಕೇಂದ್ರದ ಪಾಲು ಶೇ.15ರಿಂದ 20 ರಷ್ಟು ಅಷ್ಟೇ.ಉಳಿದದ್ದು ರಾಜ್ಯದ ಪಾಲು, ಮಟ್ರೋ ಕಂಪನಿಯ ಪಾಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಕೆಲ ಸಂಸದರು, ರಾಜ್ಯ ಸರಕಾರ ಏರಿಸಿದೆ ಎಂದು ಹೇಳುತ್ತಿದ್ದಾರೆ. ಆದರೆ, ನಿಜವಾದ ಬೆಲೆ ಏರಿಕೆಯಾಗಿರುವುದು ಯಾರಿಂದ ಎಂಬುದು ಜನತೆಗೆ ಗೊತ್ತಾಗಲಿದೆ. ಸುಳ್ಳು ಹೇಳುವುದನ್ನೇ ಬಿಜೆಪಿ ನಾಯಕರು ಛಾಳಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

