ರಾಜಕೀಯ ಸುದ್ದಿ

ಫ್ರೀ ಟಿಕೆಟ್ ನಿಂದ KSRTC ದಿವಾಳಿ ಎಂದ ಛಲವಾದಿ ನಾರಾಯಣಸ್ವಾಮಿಗೆ ಕಾಂಗ್ರೆಸ್ ಕೌಂಟರ್: ವಿಪಕ್ಷ ನಾಯಕನಾಗಲು ನಾಲಾಯಕ್ ಎಂದು ಟೀಕೆ

Share It

ಬೆಂಗಳೂರು: ಫ್ರೀ ಟಿಕೆಟ್ ನಿಂದ KSRTC ದಿವಾಳಿಯಾಗಿದೆ ಎಂದು ಆರೋಪಿಸಿದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರಿಗೆ ಕಾಂಗ್ರೆಸ್ ಟಾಂಗ್ ನೀಡಿದೆ. ನೀವು ವಿಪಕ್ಷ ನಾಯಕನಾಗಲು ನಾಲಾಯಕ್ ಎಂದು ಟೀಕಿಸಿದೆ.

ಈ ಕುರಿತು ಕಾಂಗ್ರೆಸ್ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ನಾರಾಯಣ ಸ್ವಾಮಿ ಅವರೇ, ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಕೂರಲು ನೀವು ನಾಲಾಯಕ್ ಎಂಬುದಕ್ಕೆ ನಿಮ್ಮ ಈ ಟ್ವೀಟ್ ಸಾಕ್ಷಿ. ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ಟೀಕೆ ಮಾಡಬೇಕಾದರೆ ಸಮಗ್ರ ಅಧ್ಯಯನದ ಅಗತ್ಯವಿರುತ್ತದೆ. ಅದು ನಿಮಗಿಲ್ಲ. ಗ್ಯಾರಂಟಿ ಯೋಜನೆಗಳ ಮೇಲೆ ನಿಮಗಿರುವ ಅಸೂಯೆ ನಿಮ್ಮ ಟ್ವೀಟ್ ನಲ್ಲಿ ವ್ಯಕ್ತವಾಗುತ್ತಿದೆ ಎಂದಿದೆ.

ಮಹಿಳಾ ಸಬಲೀಕರಣದೆಡೆಗಿನ‌ ದಿಟ್ಟ ಯೋಜನೆ ಶಕ್ತಿ ಯೋಜನೆ. ಇದರಿಂದ ಸಾರಿಗೆ ನಿಗಮಗಳ ಶಕ್ತಿ ಕುಂದಿದೆ ಎಂಬ ನಿಮ್ಮ ವಾದ ಹಾಸ್ಯಸ್ಪದ. ಇರಲಿ ನಿಮ್ಮ ಅಧ್ಯಯನದ ಕೊರತೆ ನಾವು ನೀಗಿಸುತ್ತೇವೆ. ತಮ್ಮ ಅವಧಿಯಲ್ಲಿ ಶಕ್ತಿ‌‌ ಯೋಜನೆಯೇ ಇರಲಿಲ್ಲ, ಮತ್ತೆ ಏಕೆ 2023 ರಲ್ಲಿ ರೂ 5900 ಕೋಟಿ‌ ಸಾಲ‌ ಬಿಟ್ಟು ಹೋಗಿದ್ದೀರಾ? ಬಿಜೆಪಿ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳ ಶೋಚನೀಯ ಸ್ಥಿತಿ ಹೇಗಿತ್ತು ಎಂಬುದನ್ನು ಮೆಲುಕು ಹಾಕಿ ಎಂದು ಕುಟುಕಿದ್ದಾರೆ.

ನಿಮ್ಮ ಕಾಲದಲ್ಲಿ ಹೊಸ ಬಸ್ಸುಗಳ ಸೇರ್ಪಡೆ ಇಲ್ಲ , ಶೂನ್ಯ‌ ನೇಮಕಾತಿ, ಡೀಸೆಲ್ ಹಣ ಬಾಕಿ, ನೌಕರರ ಭವಿಷ್ಯ ನಿಧಿ ಹಣ ಬಾಕಿ, ಬಿಡಿ ಭಾಗಗಳ ಹಣ ಬಾಕಿ, ನೌಕರರಿಗೆ ಅರ್ಧ ವೇತನ, ಈ ತಿಂಗಳ ವೇತನ ಮುಂದಿನ‌ ತಿಂಗಳು ಪಾವತಿ, ನಿವೃತ್ತ ನೌಕರರ ಉಪಧನ , ಭವಿಷ್ಯ ನಿಧಿ, ಗಳಿಕೆ ರಜೆ ವರ್ಷಾನುಗಟ್ಟಲೆ ಬಾಕಿ, ವೇತನ‌ ಹೆಚ್ಚಳ ಬಾಕಿ, ಹತ್ತಾರು ವರ್ಷಗಳಿಂದ ಮೃತ‌ ಸಿಬ್ಬಂದಿಗಳ ಅವಲಂಬಿತರು ನೌಕರಿಗಾಗಿ ಕಾಯುವಂತೆ ಮಾಡಿದಿರಿ, ಸಾರಿಗೆ ಸಂಸ್ಥೆಗಳ ಇತಿಹಾದಲ್ಲಿಯೇ ಸುದೀರ್ಘ 15 ದಿವಸಗಳ‌ ಮುಷ್ಕರ ನಡೆಸಿದ ಕೀರ್ತಿ ನಿಮ್ಮದು, ಮುಷ್ಕರದ‌ ಹೆಸರಿನಲ್ಲಿ 3000 ಕ್ಕೂ ಹೆಚ್ಚು ಅಮಾಯಕ‌ ನೌಕರರ ವಜಾ/ ಅಮಾನತು ಶಿಕ್ಷೆ. ಇಂದಿಗೂ‌‌ ನೌಕರರು‌ ಕೋರ್ಟ್ ಕಛೇರಿ‌ ಅಲೆಯುತ್ತಿದ್ದಾರೆ ಎಂದು ನೆನಪಿಸಿದೆ.‌

ಇವಿಷ್ಟೂ ನಿಮ್ಮ ವೈಫಲ್ಯಗಳ ಪಟ್ಟಿಯಾದರೆ, ನಮ್ಮ ಸರ್ಕಾರ ಎರಡೂವರೆ ವರ್ಷಗಳಲ್ಲಿ ಮಾಡಿರುವ ಸಾಧನೆಯನ್ನು ನೋಡಿ. ಮಾವು ಅಧಿಕಾರಕ್ಕೆ ಬಂದ ಮೇಲೆ 7800 ಹೊಸ ಬಸ್ಸುಗಳನ್ನು ಸೇರ್ಪಡೆ, 10000 ನೇಮಕಾತಿ, 1200 ಅನುಕಂಪದ‌ ನೌಕರಿ, 2400 ಕ್ಕೂ ಹೆಚ್ಚು ಬಸ್ಸುಗಳ ಪುನಶ್ಚೇತನ ಕಾರ್ಯ, ಡೀಸೆಲ್ ಮತ್ತು ನೌಕರರ ಭವಿಷ್ಯ ನಿಧಿ ಪಾವತಿಗೆ ರೂ.2000 ಕೋಟಿ ಸಾಲ, ಅದರ‌ ಅಸಲು‌ ಮತ್ತು ಬಡ್ಡಿಯನ್ನು ಸರ್ಕಾರ ಪಾವತಿಸುತ್ತಿದೆ. ನಿವೃತ್ತ ನೌಕರರ ವೇತನ ಹೆಚ್ಚಳ ವ್ಯತ್ಯಾಸ ಮೊತ್ತ ಪಾವತಿಗೆ ರೂ.224 ಕೋಟಿ‌ ಬಿಡುಗಡೆ, ಶಕ್ತಿ ಯೋಜನೆಯಡಿಯಲ್ಲಿ 4 ನಿಗಮಗಳಿಗೆ ಇಲ್ಲಿಯವರೆಗೆ ರೂ. 12632.10 ಕೋಟಿ ಪಾವತಿ ಮಾಡಿದ್ದೇವೆ ಎಂದು ವಿವರ ನೀಡಿದೆ.

ಇಂತಹ ಪರಿಸ್ಥಿತಿಯಲ್ಲಿ ಯಾವ ನೈತಿಕತೆಯಲ್ಲಿ ಸಾರಿಗೆ ಸಂಸ್ಥೆಗಳನ್ನು‌‌ ಉಳಿಸುವ ಬಗ್ಗೆ ಮಾತನಾಡುವುದಕ್ಕೆ? ಸಾರಿಗೆ ಸಂಸ್ಥೆಗಳನ್ನು ಎಲ್ಲಾ ರೀತಿಯಿಂದಲೂ ಸಶಕ್ತಗೊಳಿಸುವ ಬದ್ಧತೆ ನಮ್ಮದು. ನಾವು ಅದನ್ನು ಮಾಡುತ್ತೇವೆ. ಇನ್ನು ಮುಂದೆಯಾದರೂ ಸರಿಯಾಗಿ ಸಂಪೂರ್ಣ ವಿಷಯ ತಿಳಿದು ಸರ್ಕಾರದ ವಿರುದ್ಧ ಟೀಕೆ ಮಾಡಿ. ಇಲ್ಲದಿದ್ದರೆ ಈ ರೀತಿ ನಮ್ಮ ಕೈಗೆ ಕೋಲು ಕೊಟ್ಟು ಹೊಡೆಸಿಕೊಳ್ಳುವ ಪರಿಸ್ಥಿತಿ ಬರುವುದಿಲ್ಲ ಎಂದು ವ್ಯಂಗ್ಯವಾಡಿದೆ.


Share It

You cannot copy content of this page