ಔರಂಗಾಬಾದ್ : ತಮ್ಮ ಪೋಷಕರು ಶಾಲೆಯಲ್ಲಿ ಗಂಡು ಮಕ್ಕಳೊಂದಿಗೆ ಬರೆತಿದ್ದನ್ನು ಪ್ರಶ್ನಸಿದರು ಎಂಬ ಕಾರಣಕ್ಕೆ ಐವರು ಬಾಲಕಿಯರು ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದು, ಅದರಲ್ಲಿ ಓರ್ವ ಬಾಲಕಿ ಬದುಕುಳಿದು ಉಳಿದವರೆಲ್ಲರೂ ಸಾವನ್ನಪ್ಪಿರುವ ಘಟನೆ ನಡೆದಿದೆ.
ಔರಂಗಾಬಾದ್ ಜಿಲ್ಲೆಯ ಹಸ್ಪುರ ಪೊಲೀಸ್ ಠಾಣೆಯ ದಲಿತ ಬಡಾವಣೆಯಲ್ಲಿ ವಾಸವಿದ್ದ ಐವರು ಬಾಲಕಿಯರು ಜಮೀನಿನಲ್ಲಿ ಕಳೆನಾಶಕ ಸೇವಿಸಿದ್ದರು. ಅದರಲ್ಲಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಮತ್ತೊಬ್ಬ ಬಾಲಕಿ ಮನೆಗೆ ಓಡಿ ಬಂದು ವಿಷಯ ತಿಳಿಸಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತಪಟ್ಟ ನಾಲ್ವರು ಬಾಲಕಿಯರನ್ನು ಕುಟುಂಬಸ್ಥರು ಅಂತ್ಯಸಂಸ್ಕಾರ ನಡೆಸಿದ್ದು, ಘಟನೆ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾದ ನಂತರವಷ್ಟೇ ಪೊಲೀಸರ ಗಮನಕ್ಕೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಕೈಗೊಂಡಿದ್ದಾರೆ. ಬದುಕಿಳಿದಿರುವ ಬಾಲಕಿಯ ಹೇಳಿಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.
ಮೃತಪಟ್ಟ ಎಲ್ಲ ಬಾಲಕಿಯರು 14 ವರ್ಷದವರಾಗಿದ್ದು, ಬಾಲಕಿಯ ಹೇಳಿಕೆಯ ಪ್ರಕಾರ ಕುಟುಂಬಸ್ಥರ ಬೆದರಿಕೆಯ ನಂತರ ಎಲ್ಲರೂ ಹೊಲದಲ್ಲಿ ಕೀಟನಾಶಕ ಸೇವಿಸಿದರು. ನಾಲ್ವರು ಮೃತಪಟ್ಟಿದ್ದು ಕಂಡು ಗಾಬರಿಯಾದ ಮತ್ತೊಬ್ಬಾಕೆ ಮನೆಗೆ ಓಡಿಬಂದು ವಿಷಯ ತಿಳಿಸಿದಳು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಬದುಕಿಸಲಾಯಿತು ಎಂದು ವರದಿಯಾಗಿದೆ.
ಘಟನೆ ಜನವರಿ 29ರಂದು ನಡೆದಿದ್ದು, ಅದೇ ದಿನ ಎಲ್ಲ ಬಾಲಕಿಯರ ಅಂತ್ಯಕ್ರಿಯೆ ನಡೆಸಲಾಗಿದೆ. ಇದೀಗ ಹಸ್ಪುರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡು ಕುಟುಂಬಸ್ಥರನ್ನು ವಿಚಾರಣೆ ನಡೆಸಲಾಗುತ್ತಿದೆ.

