ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರ ಗನ್ ಲೈಸೆನ್ಸ್ ಅಮಾನತಿನಲ್ಲಿಟ್ಟ ಪೊಲೀಸರ ಕ್ರಮಕ್ಕೆ ಹೈಕೋಟ ಮಧ್ಯಂತರ ತಡೆ ನೀಡಿದೆ.
ಶಸ್ತ್ರಾಸ್ತ್ರ ಪರವಾನಗಿ ಅಮಾನತು ಕ್ರಮ ಪ್ರಶ್ನಿಸಿ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ನೀಡಿದ್ದು, ಆಕ್ಷೇಪಣೆ ಸಲ್ಲಿಸುವಂತೆ ಸರಕಾರ ಹಾಗೂ ಆಡಳಿತ ವಿಭಾಗದ ಡಿಸಿಪಿಗೆ ನೊಟೀಸ್ ಜಾರಿ ಮಾಡಿತು.
೨೦೦೮ ರಲ್ಲಿ ಪಿಸ್ತೂಲ್ ಹೊಂದಲು ದರ್ಶನ್ ಪರವಾನಗಿ ಪಡೆದಿದ್ದು, ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿರುವ ಕಾರಣಕ್ಕೆ ಲೈಸೆನ್ಸ್ ರದ್ದು ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಆದರೆ, ಈಗ ಜಾಮೀನು ರದ್ದಾಗಿದ್ದು, ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ತಮ್ಮ ಬಳಿಯ ಶಸ್ತ್ರಾಸ್ತ್ರವನ್ನು ಸರಕಾರಕ್ಕೆ ಹಿಂದಿರುಗಿಸಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ. ಆದ್ದರಿಂದ ಮುಂದಿನ ವಿಚಾರಣೆವರೆಗೆ ಆದೇಶಕ್ಕೆ ತಡೆ ನೀಡಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

