ಸುದ್ದಿ

ಫಲಾನುಭವಿಗಳ ಆಯ್ಕೆ : ಶಾಸಕರ ಅಧಿಕಾರಕ್ಕೆ ಬ್ರೇಕ್: ಸಚಿವರಿಂದಲೇ ನೇರ ಆಯ್ಕೆಗೆ ತೀರ್ಮಾನ

Share It

ಬೆಂಗಳೂರು: ವಿವಿಧ ನಿಗಮಗಳ ಫಲಾನುಭವಿಗಳ ಆಯ್ಕೆಗೆ ಸಂಬಂಧಿಸಿ ಶಾಸಕರ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಅವರ ಅಧಿಕಾರವನ್ನು ಮೊಟುಕುಗೊಳಿಸಲು ಸರಕಾರ ತೀರ್ಮಾನಿಸಿದೆ.

ಹಿಂದುಳಿದ ಇಲಾಖೆಯ ವ್ಯಾಪ್ತಿಗೆ ಬರುವ ಅನೇಕ ಜಾತಿಗಳ ಅಭಿವೃದ್ಧಿ ನಿಗಮಗಳ ಫಲಾನುಭವಿಗಳ ಆಯ್ಕೆಯಲ್ಲಿ ಶಾಸಕರು ಆಸಕ್ತಿ ತೋರುತ್ತಿಲ್ಲ. ಇದರಿಂದ ಸೂಕ್ತ ಫಲಾನುಭವಿಗಳ ಆಯ್ಕೆ ಮಾಡುವುದು ಕಷ್ಟವಾಗುತ್ತಿದೆ. ಇದಕ್ಕೆ ಶಾಸಕರು ಅನೇಕ ಸಬೂಬು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ನೇತೃತ್ವದ ಆಯ್ಕೆ ಸಮಿತಿಯನ್ನೇ ರದ್ದು ಮಾಡಲು ತೀರ್ಮಾನಿಸಲಾಗಿದೆ.

ವರ್ಷಾಂತ್ಯ ಸಮೀಪಿಸಿದ್ದರೂ, ಶಾಸಕರು ಆಯ್ಕೆ ಪಟ್ಟಿ ಸಲ್ಲಿಕೆ ಮಾಡಿಲ್ಲ, ಇದರಿಂದಾಗಿ ನಿಗಮಗಳ ಅನುದಾನ ಬಳಕೆಗೆ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ಇನ್ಮುಂದೆ ಆಯಾ ಇಲಾಖೆ ಸಚಿವರೇ ನೇರವಾಗಿ ಕ್ಷೇತ್ರವಾರು ಫಲಾನುಭವಿಗಳ ಆಯ್ಕೆ ಮಾಡಲಿದ್ದಾರೆ.

ಈ ಸಂಬಂಧ ಗುರುವಾರ ಸಂಜೆ ನಡೆಯುವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು ಸರಕಾರ ತೀರ್ಮಾನಿಸಿದೆ. ಸಂಪುಟ ಸಭೆಯ ಕಾರ್ಯಸೂಚಿಯಲ್ಲಿ ಈ ಅಂಶವನ್ನು ಸೇರಿಸಿದ್ದು, ತೀರ್ಮಾನ ಅಂತಿಮವಾಗುವುದು ಬಹುತೇಕ ನಿರೀಕ್ಷಿತವಾಗಿದೆ.

ಸಚಿವ ಸಂಪುಟ ಸಭೆಯು ಅಂತಿಮ ತೀರ್ಮಾನ ತೆಗೆದುಕೊಂಡದ್ದೇ ಆದರೆ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮಿಕಿ ನಿಗಮ, ಭೋವಿ ಅಭಿವೃದ್ಧಿ ನಿಗಮಗಳು ಸೇರಿದಂತೆ ಪ್ರಮುಖ ನಿಗಮಗಳ ಫಲಾನುಭವಿಗಳ ಆಯ್ಕೆಯನ್ನು ಸತಃ ಆಯಾ ಇಲಾಖೆಗಳ ಸಚಿವರೇ ಮಾಡಲಿದ್ದಾರೆ.


Share It

You cannot copy content of this page