ಸುದ್ದಿ

ಉರ್ದು ಪತ್ರಿಕೆ ಜಾಹೀರಾತು ನೋಡಿ ಉರಿದುಕೊಳ್ಳೋದ್ ಯಾಕೆ? ಊಸರವಳ್ಳಿ ನಾಟಕ ಬಿಡಿ : BJP ಅವಧಿಯ ಜಾಹೀರಾತು ಸಮೇತ ಜನ್ಮ ಜಾಲಾಡಿದ ರಾಮಲಿಂಗಾ ರೆಡ್ಡಿ !

Share It

ಬೆಂಗಳೂರು: ಉರ್ದು ಪತ್ರಿಕೆಗಳಿಗೆ ಸರಕಾರ ನೀಡಿದ್ದ ಜಾಹೀರಾತು ವಿರೋಧಿಸಿದ್ದ ಬಿಜೆಪಿ ನಾಯಕರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಟಾಂಗ್ ನೀಡಿದ್ದು, ಬಿಜೆಪಿ ಅವಧಿಯ ಜಾಹೀರಾತು ತುಣುಕುಗಳನ್ನು ಹಾಕಿ ಕುಟುಕಿದ್ದಾರೆ.

ಟ್ವೀಟ್ ಮೂಲಕ ಆರ್. ಅಶೋಕ್ ಅವರನ್ನು ಪ್ರಶ್ನಿಸಿರುವ ಸಚಿವರು, ಅಶೋಕ್ ಅವರೇ,ಹಿಂದೆ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಹತ್ತಾರು ಬಾರಿ ಉರ್ದು ಪತ್ರಿಕೆಗಳಿಗೆ ಉರ್ದು ಜಾಹೀರಾತುಗಳನ್ನು ನೀಡಲಾಗಿತ್ತು. ಅಂದು ನೀವು ಮತ್ತು ಬಿಜೆಪಿ ಯಾರ ಓಲೈಕೆಗೆ ಈ ನಿರ್ಧಾರ ಮಾಡಿದ್ದಿರಿ? ಆ ಸಂದರ್ಭದಲ್ಲಿ ಇದು ನಿಮಗೆ ತುಷ್ಟೀಕರಣದಂತೆ ಭಾಸವಾಗಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಈಗ ನಮ್ಮ ಸರ್ಕಾರದ ಜಾಹೀರಾತನ್ನು ಕಂಡೊಡನೆ, ನಿಮ್ಮೊಳಗಿದ್ದ ಕನ್ನಡಪ್ರೇಮ ದಿಢೀರನೆ ಜಾಗೃತಗೊಂಡಿದ್ದು ಹೇಗೆ ಎಂಬುದನ್ನು ರಾಜ್ಯದ ಜನತೆಗೆ ಮೊದಲು ವಿವರಿಸಿ. ನಿಮ್ಮ ಈ ‘ದ್ವಂದ್ವ ನಿಲುವು’ ಹಾಗೂ ‘ಬೂಟಾಟಿಕೆಯ’ ವರ್ತನೆಯನ್ನು ನೋಡಿದರೆ, ಊಸರವಳ್ಳಿ ಬಣ್ಣ ಬದಲಿಸುವುದೂ ನಾಚುವಂತಿದೆ! ಇತ್ತೀಚೆಗೆ ಉರ್ದು ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ರಾಜ್ಯ ಸರ್ಕಾರದ ಉರ್ದು ಭಾಷೆಯ ಜಾಹೀರಾತನ್ನೇ ನೆಪವಾಗಿಟ್ಟುಕೊಂಡು, ನೀವು ಸೇರಿ ಹಲವು ಬಿಜೆಪಿ ನಾಯಕರು ಮಾಡುತ್ತಿರುವ ಅನಗತ್ಯ ಗದ್ದಲ ನಿಮ್ಮ ಆತ್ಮವಂಚನೆಯನ್ನು ಜಗಜ್ಜಾಹೀರು ಮಾಡಿದೆ ಎಂದಿದ್ದಾರೆ.

ಅಸಲಿಗೆ, ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಕುರಿತ ಮಾಹಿತಿ ಜನಸಾಮಾನ್ಯರನ್ನು ತಲುಪಬೇಕು ಎಂಬುದೇ ಜಾಹೀರಾತುಗಳ ಪ್ರಮುಖ ಉದ್ದೇಶ. ಯಾವ ಭಾಷೆ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟವಾಗುತ್ತದೆಯೋ, ಅದೇ ಭಾಷೆಯಲ್ಲಿ ನೀಡಿದರೆ ಓದುಗರಿಗೆ ಸುಲಭವಾಗಿ ಅರ್ಥವಾಗುತ್ತದೆ ಎಂಬ ಸದುದ್ದೇಶದಿಂದ ಈ ಪದ್ಧತಿಯನ್ನು ಹಿಂದಿನಿಂದಲೂ ಪಾಲಿಸಿಕೊಂಡು ಬರಲಾಗುತ್ತಿದೆ ಎಂದು ಸ್ಪಷ್ಟೀಕರಿಸಿದ್ದಾರೆ.

ರಾಜ್ಯದ ನೆಲ, ಜಲ, ಭಾಷೆಯ ಕುರಿತ ನಮ್ಮ ಬದ್ಧತೆಯ ಬಗ್ಗೆ ನಮಗೆ ಸ್ಪಷ್ಟ ಅರಿವಿದೆ. ಕೇವಲ ರಾಜಕೀಯ ಲಾಭಕ್ಕಾಗಿ ಸುಖಾಸುಮ್ಮನೆ ಬೊಬ್ಬೆ ಹೊಡೆಯುವ ನಿಮ್ಮಂತಹ ಬಿಜೆಪಿ ನಾಯಕರಿಂದ ಇದರ ಪಾಠ ಕಲಿಯುವ ಸ್ಥಿತಿ ನಮಗೊದಗಿಲ್ಲ ಎಂದು ಕುಟುಕಿದ್ದಾರೆ.


Share It

You cannot copy content of this page