ಬೆಂಗಳೂರು: ಸಿನಿಮಾ ನಿರ್ದೇಶಕರೊಬ್ಬರನ್ನು ಅಪಹರಿಸಿ, ಹಲ್ಲೆ ಮಾಡಿ ಚಿನ್ನಾಭರಣ ಹಾಗೂ ಹಣ ದೋಚಿರುವ ಪ್ರಕರಣಕ್ಕೆ ಸಂಬಂಧಿಸಿ ಓರ್ವ ನಟಿ ಸೇರಿ 11 ಆರೋಪಿಗಳನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮುಂಬೈಗೆ ಸ್ಥಳಾಂತಗೊಂಡಿದ್ದ ಯುವ ನಿರ್ದೇಶಕ ಅನೀಶ್ ಎಂಬುವವರನ್ನ ಅಪಹರಿಸಿದ ಆರೋಪದಡಿ ನಟಿ ಐಶ್ವರ್ಯಾ, ಆಶೀರ್ವಾದ್ ಸೇರಿದಂತೆ 11 ಮಂದಿಯನ್ನ ಬಂಧಿಸಲಾಗಿದೆ. ‘ಭರವಸೆಯೇ ಜೀವನ’ ಸೇರಿ ಕೆಲ ಕಿರುಚಿತ್ರ ನಿರ್ದೇಶಿಸಿದ್ದ ಅನೀಶ್, ಇತ್ತೀಚೆಗೆ ‘ಜೀವನದ ಭಾಷೆ’ ಎಂಬ ಹೊಸ ಚಲನಚಿತ್ರ ನಿರ್ದೇಶಿಸಲು ಮುಂದಾಗಿದ್ದರು.
ಆದರೆ, ಕೆಲ ಕಾರಣಗಳಿಂದಾಗಿ ಸಿನಿಮಾ ನಿಲ್ಲಿಸಿ ಮುಂಬೈಗೆ ಸ್ಥಳಾಂತರಗೊಂಡಿದ್ದರು. ಈ ನಡುವೆ ಅನೀಶ್ ತಮ್ಮ ಕಾರನ್ನು ಮಾರಾಟ ಮಾಡುವ ಉದ್ದೇಶದಿಂದ ಪರಿಚಯವಿದ್ದ ನಟಿ ಐಶ್ವರ್ಯಾಗೆ ಮಾಹಿತಿ ನೀಡಿದ್ದರು. ದುನಿಯಾ ವಿಜಯ್ ನಿರ್ದೇಶನದ ಭೀಮಾ ಸಿನಿಮಾದಲ್ಲಿ ನಟಿಸಿದ್ದ ಐಶ್ವರ್ಯಾ, ಅನೀಶ್ ಅವರಿಗೆ ಪರಿಚಿತಳಾಗಿದ್ದರು. ಇದೇ ಮಾಹಿತಿ ಬಳಸಿಕೊಂಡ ಆರೋಪಿಗಳು, ಐಶ್ವರ್ಯಾ ಮೂಲಕ ಅನೀಶ್ ಅವರನ್ನು ಸಂಪರ್ಕಿಸಿದ್ದರು.
ಕಾರು ಖರೀದಿ ನೆಪದಲ್ಲಿ ಕರೆ ಮಾಡಿ, ನಟಿ ಮೂಲಕವೇ ಅನೀಶ್ ಅವರನ್ನು ಮುಂಬೈನಿಂದ ಬೆಂಗಳೂರಿಗೆ ಕರೆಸಿಕೊಳ್ಳಲಾಗಿತ್ತು. ಬಳಿಕ ಆಡುಗೋಡಿ ಠಾಣೆ ವ್ಯಾಪ್ತಿಯಿಂದ ಅನೀಶ್ ಅವರನ್ನ ಆರೋಪಿಗಳು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ಬ್ಯಾಡರಹಳ್ಳಿ ಮನೆಯೊಂದರಲ್ಲಿ ಇರಿಸಿ, ಕ್ರಿಕೆಟ್ ಸ್ಟಂಪ್ ಹಾಗೂ ಹಾಕಿ ಸ್ಟಿಕ್ ಬಳಸಿ ಹಲ್ಲೆ ನಡೆಸಿ, ಅನೀಶ್ ಬಳಿ ಇದ್ದ ಚಿನ್ನಾಭರಣ ಹಾಗೂ ನಗದು ಕಿತ್ತುಕೊಂಡು ಮಧುಗಿರಿ ಸಮೀಪ ಬಿಟ್ಟು ಪರಾರಿಯಾಗಿದ್ದರು.
ಪ್ರಮುಖ ಆರೋಪಿ ಹಾಗೂ ಆಶೀರ್ವಾದ್ ನಡುವೆ ಹಿಂದೆ ಸುಮಾರು 5 ಲಕ್ಷ ರೂಪಾಯಿ ಹಣದ ವಿಚಾರವಾಗಿ ಜಗಳವಾಗಿತ್ತು. ಅದೇ ಕಾರಣಕ್ಕೆ ಈ ಕೃತ್ಯ ಎಸಗಿರುವುದು ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆಗ್ನೇಯ ವಿಭಾಗದ ಡಿಸಿಪಿ ಸುಜೀತಾ ಸಲ್ಮಾನ್, “ಫೆಬ್ರವರಿ 11ರಂದು ಆಸ್ಪತ್ರೆಗೆ ಎಂಎಲ್ಸಿ ವರದಿ ಬಂದಿತ್ತು. ಅನೀಶ್ ಕೈ, ಕಾಲು ಸೇರಿ ದೇಹದ ಹಲವೆಡೆ ಗಾಯಗಳಾಗಿದ್ದವು. ಮಾಹಿತಿಯನ್ವಯ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿತ್ತು. ಆರೋಪಿಗಳು ಸಂತ್ರಸ್ತನಿಗೆ ಪರಿಚಯದವರೇ ಆಗಿದ್ದಾರೆ. ಹಣಕಾಸಿನ ವಿಚಾರದಲ್ಲಿ ಗಲಾಟೆ ನಡೆದಿದೆ. ಬಂಧಿತ ಯುವತಿ, ಸಂತ್ರಸ್ತನನ್ನು ಕರೆಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು” ಎಂದು ತಿಳಿಸಿದ್ದಾರೆ.

