ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಚೇರಿಯಲ್ಲಿ ಚಲಾವಣೆ ರದ್ದಾಗಿರುವ 2,000 ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ಬದಲಾಯಿಸಲು ಯತ್ನಿಸಿದ 52 ವರ್ಷದ ವ್ಯಕ್ತಿಯನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. 2 ಸಾವಿರ ಮುಖಬೆಲೆಯ 300ಕ್ಕೂ ಹೆಚ್ಚು ನೋಟುಗಳನ್ನು ತಂದಿದ್ದ ವ್ಯಕ್ತಿ, 7 ಲಕ್ಷ ರೂ.ಗೂ ಹೆಚ್ಚು ಮೊತ್ತವನ್ನು ಜಮಾ ಮಾಡುವಂತೆ ಕೇಳಿದ್ದ ಎನ್ನಲಾಗಿದೆ.
ನಾಗಶೆಟ್ಟಿಹಳ್ಳಿಯ ನಿವಾಸಿ ಎಸ್.ವಿ. ರಮೇಶ್ ಬಂಧಿತ ಆರೋಪಿ. ಈತ ಏಪ್ರಿಲ್ 9ರಂದು ನೃಪತುಂಗ ರಸ್ತೆಯಲ್ಲಿರುವ ಆರ್ಬಿಐ ಕಚೇರಿಗೆ ಭೇಟಿ ನೀಡಿ, ತನ್ನ ಬಳಿಯಿದ್ದ 375 ನೋಟುಗಳನ್ನು ನೀಡಿ ಒಟ್ಟು 7.5 ಲಕ್ಷ ರೂಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ಕೋರಿದ್ದ. ಆದರೆ, ಅಧಿಕಾರಿಗಳು ನೋಟುಗಳನ್ನು ತಪಾಸಣೆ ನಡೆಸಿದಾಗ ಅವುಗಳು ನಕಲಿ ಎಂದು ತಿಳಿದುಬಂದಿದೆ. ಆರ್ಬಿಐ ಸಹಾಯಕ ಜನರಲ್ ಮ್ಯಾನೇಜರ್ ಭೀಮ್ ಚೌಧರಿ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

