ಅಪರಾಧ ಸುದ್ದಿ

ಹೆತ್ತವರ ಶವಗಳಿದ್ದ ಕಾರಿನಲ್ಲೇ ಹಂತಕನೊಂದಿಗೆ ಸುತ್ತಾಟ; ಸರಣಿ ಹತ್ಯಾಕಾಂಡದ ಕರಾಳ ಬಿಚ್ಚಿಟ್ಟ ಬಾಲಕ!

Share It

ಬೆಂಗಳೂರು: ಒಂದೇ ಕುಟುಂಬದ 7 ಜನರ ಸರಣಿ ಹತ್ಯಾಕಾಂಡದ ಪ್ರಕರಣದಲ್ಲಿ ಹಂತಕನ ಭಯಾನಕ ಕ್ರೌರ್ಯದ ಬಗ್ಗೆ ಬದುಕುಳಿದ 11 ವರ್ಷದ ಬಾಲಕ ವಿವರಿಸಿದ್ದಾನೆ.

ಹತ್ಯೆಗೀಡಾದ ಶಂಕರ್ ಮತ್ತು ನಳಿನಿ ದಂಪತಿ ಪುತ್ರನಾಗಿರುವ ಈ ಬಾಲಕ, ತನ್ನ ಪೋಷಕರ ಮೃತದೇಹಗಳನ್ನೇ ಕಾರಿನಲ್ಲಿ ಇಟ್ಟುಕೊಂಡು ಕಟುಕ ಇಂದುಶೇಖರ್ ಜತೆಗೆ ವಿವಿಧ ಸ್ಥಳಗಳಲ್ಲಿ ಓಡಾಡಿದ್ದ ಎಂಬ ಆಘಾತಕಾರಿ ಸಂಗತಿ ತಿಳಿಸಿದ್ದಾನೆ. ಅಷ್ಟೇ ಅಲ್ಲ, ಮೃತದೇಹಗಳನ್ನು ಚೀಲಗಳಲ್ಲಿ ತುಂಬಿ ನಿರ್ಜನ ಪ್ರದೇಶಗಳಲ್ಲಿ ಎಸೆಯುವುದನ್ನೂ ತಾನು ನೋಡಿರುವುದಾಗಿ ಪೊಲೀಸರಿಗೆ ಹೇಳಿದ್ದಾನೆ.

ಪೊಲೀಸರ ಮುಂದೆ ಹೇಳಿಕೆ ದಾಖಲಿಸಲು ಆಗಮಿಸಿದ್ದ ಬಾಲಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, “ಶುಕ್ರವಾರ ಪೋಷಕರೊಂದಿಗೆ ಇಂದುಶೇಖರ್ ಅವರ ಮನೆಗೆ ಹೋಗಿದ್ದೆ. ಅಂದು ರಾತ್ರಿ ಮೂವರು ಅಲ್ಲಿಯೇ ಮಲಗಿದ್ದೆವು. ಮರುದಿನ ಬೆಳಗ್ಗೆದ್ದು ನೋಡಿದಾಗ ತಂದೆ ಮನೆಯಲ್ಲಿ ಇರಲಿಲ್ಲ. ಬಳಿಕ ತಾಯಿಯೊಂದಿಗೆ ಹೊರಗೆ ಹೋಗಲು ಮುಂದಾದಾಗ ಮನೆಯಲ್ಲಿದ್ದ ಮತ್ತೊಬ್ಬರು (ಅಕ್ಕ) ನನ್ನನ್ನು ಒಳಗೆಳೆದುಕೊಂಡು ಬಾಗಿಲು ಹಾಕಿದರು. ಈ ವೇಳೆ ತಾಯಿ ಜೋರಾಗಿ ಕಿರುಚಿದ ಶಬ್ದ ಕೇಳಿಸಿತು. ಆ ನಂತರ ಏನಾಯಿತೆಂದು ನನಗೆ ಗೊತ್ತಿಲ್ಲ” ಎಂದು ಹೇಳಿಕೊಂಡಿದ್ದಾನೆ.

“ಇದಾದ ಬಳಿಕ ಇಂದುಶೇಖರ್ ನನ್ನನ್ನು ತನ್ನ ಕಾರಿನಲ್ಲಿ ಕರೆದೊಯ್ದರು. ಈ ವೇಳೆ ಕಾರಿನಲ್ಲಿ ಕೆಲವು ಚೀಲಗಳಿದ್ದವು. ಡಿಕ್ಕಿ ಹಾಗೂ ಆಸನಗಳ ಕೆಳಭಾಗದಲ್ಲಿ ಚೀಲಗಳನ್ನು ಇಡಲಾಗಿತ್ತು. ಚೀಲಗಳ ಬಗ್ಗೆ ನಾನು ಕೇಳಿದಾಗ, ಅವು ಕಸದ ಚೀಲಗಳು, ಬೇರೆಡೆ ಎಸೆಯಲು ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದರು. ಚೀಲಗಳನ್ನು ಮುಟ್ಟಲು ಪ್ರಯತ್ನಿಸಿದಾಗಲೆಲ್ಲ ಗದರಿಸುತ್ತಿದ್ದರು. ಕಾರಿನಲ್ಲಿ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಶೃಂಗೇರಿ ಹಾಗೂ ಬೆಂಗಳೂರು ವಿಮಾನ ನಿಲ್ದಾಣ ಸೇರಿ ವಿವಿಧ ಸ್ಥಳಗಳಿಗೆ ಕರೆದುಕೊಂಡು ಹೋದರು” ಎಂದು ಬಾಲಕ ಮಾಹಿತಿ ನೀಡಿದ್ದಾನೆ.

“ಮೃತದೇಹಗಳನ್ನು ನಿರ್ಜನ ಪ್ರದೇಶಗಳಲ್ಲಿ ಎಸೆಯುವಾಗ ಇಂದುಶೇಖರ್ ಸುತ್ತಮುತ್ತ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದರು. ಬಳಿಕವೇ ಒಂದೊಂದೇ ಚೀಲಗಳನ್ನು ಒಂದೊಂದಾಗಿ ಎಸೆದು ಬರುತ್ತಿದ್ದರು. ಹೀಗೆ ನಾಲ್ಕು ಚೀಲಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಎಸೆದಿರುವುದನ್ನು ನಾನು ನೋಡಿದೆ” ಎಂದು ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ.

ಪತ್ನಿಯ ಕುಟುಂಬದವರನ್ನೆಲ್ಲಾ ಹತ್ಯೆಗೈದ ಬಳಿಕ ಬಾಲಕನನ್ನೂ ಮುಗಿಸಲು ಸಂಚು ರೂಪಿಸಿದ್ದ ಆರೋಪಿಯನ್ನು ಅಷ್ಟರಲ್ಲಾಗಲೇ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಾಲಕನನ್ನೂ ಹತ್ಯೆಗೈಯ್ಯುವ ತಯಾರಿಯಲ್ಲಿದ್ದ. ಆದರೆ, ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

​12 ದಿನ ಪೊಲೀಸ್ ಕಸ್ಟಡಿಗೆ: ಆರೋಪಿ ಇಂದುಶೇಖರ್‌ನನ್ನು 12 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಿ ಬೆಂಗಳೂರಿನ 32ನೇ ಎಸಿಜೆಎಂ ನ್ಯಾಯಾಲಯ ಆದೇಶಿಸಿದೆ. ಶುಕ್ರವಾರ ಸಂಜೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪೊಲೀಸರು, 14 ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು 12 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ.


Share It

You cannot copy content of this page