ಮಂಜೇಗೌಡ ಕೆ.ಜಿ, ವಕೀಲರು, ಬೆಂಗಳೂರು
ಜಮೀನು, ಜಾಗ ಅಥವಾ ಮನೆ ಕೊಳ್ಳುವುದು ಪ್ರತಿಯೊಬ್ಬರ ಜೀವನದ ಅತಿ ದೊಡ್ಡ ಕನಸು ಮತ್ತು ಶ್ರಮದ ಗಳಿಕೆಯ ಹೂಡಿಕೆಯಾಗಿದೆ. ಆದರೆ, ಆತುರದಲ್ಲೋ ಅಥವಾ ಮಾಹಿತಿ ಕೊರತೆಯಿಂದಲೋ ಮಾಡುವ ಒಂದು ಸಣ್ಣ ತಪ್ಪು, ನಿಮ್ಮನ್ನು ವರ್ಷಗಟ್ಟಲೆ ಕೋರ್ಟ್ ಕಚೇರಿ ಅಲೆಯುವಂತೆ ಮಾಡಬಹುದು ಅಥವಾ ನಿಮ್ಮ ಹಣವನ್ನು ಅಪಾಯಕ್ಕೆ ಸಿಲುಕಿಸಬಹುದು.
ಸೈಟ್ ಅಥವಾ ಮನೆ ಕೊಳ್ಳುವಾಗ ಬಹುತೇಕ ಖರೀದಿದಾರರು, ಮಾರಾಟಗಾರರು (Seller) ತೋರಿಸುವ ಕ್ರಯಪತ್ರ (Sale Deed), ಆಸ್ತಿ ತೆರಿಗೆ ರಶೀದಿ (Tax Receipt) ಅಥವಾ ಬ್ರೋಕರ್ ಮಾತನ್ನಷ್ಟೇ ನಂಬಿ ಮೋಸಹೋಗುತ್ತಾರೆ. ಆದರೆ ನೆನಪಿಡಿ ರಿಜಿಸ್ಟರ್ ಆಗಿರುವಂತಹ ಕ್ರಯಪತ್ರ (Registered Sale Deed) ಒಂದೇ ಆಸ್ತಿಯ ಪೂರ್ಣ ಮಾಲೀಕತ್ವವನ್ನು ಸಾಬೀತುಪಡಿಸುವುದಿಲ್ಲ.
ಕರ್ನಾಟಕದಲ್ಲಿ (ವಿಶೇಷವಾಗಿ ಬೆಂಗಳೂರು ಸೇರಿದಂತೆ) ಯಾವುದೇ ಆಸ್ತಿ ಖರೀದಿಸುವ ಮುನ್ನ ನೀವು ಕಡ್ಡಾಯವಾಗಿ ಪರಿಶೀಲಿಸಬೇಕಾದ ಪ್ರಮುಖ ಕಾನೂನು ಅಂಶಗಳು ಮತ್ತು ದಾಖಲೆಗಳು ಇಲ್ಲಿವೆ:
ಮಾಲೀಕತ್ವ ಮತ್ತು ಆಸ್ತಿಯ ಹಕ್ಕು ಪರಿಶೀಲನೆ (Ownership & Title Verification)
ಆಸ್ತಿಯನ್ನು ಪ್ರಸ್ತುತ ಮಾರಾಟ ಮಾಡುತ್ತಿರುವ ವ್ಯಕ್ತಿಗೆ ಅದನ್ನು ಮಾರಾಟ ಮಾಡಲು ಪೂರ್ಣ ಕಾನೂನುಬದ್ಧ ಹಕ್ಕಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ಮೂಲ ದಾಖಲೆಗಳು (Original Documents): ಮಾರಾಟಗಾರನ ಬಳಿ ಮೂಲ ಕ್ರಯಪತ್ರ, ಭಾಗಪತ್ರ (Partition Deed), ದಾನಪತ್ರ (Gift Deed) ಅಥವಾ ಹಕ್ಕು ಬಿಡುಗಡೆ ಪತ್ರ (Release Deed) ಇದೆಯೇ ಎಂದು ನೋಡಿ.
- ಮದರ್ ಡೀಡ್ / ಲಿಂಕ್ ಡೀಡ್ (Mother Deed): ಕನಿಷ್ಠ ಕಳೆದ ೩೦ ವರ್ಷಗಳ ಆಸ್ತಿಯ ಕೈಬದಲಾವಣೆಯ ಇತಿಹಾಸ (Chain of Title) ತಿಳಿಸುವ ದಾಖಲೆಗಳನ್ನು ಪರಿಶೀಲಿಸಬೇಕು. ಹೆಚ್ಚಿನ ಸುರಕ್ಷತೆಯ ದೃಷ್ಟಿಯಿಂದ ಕೆಲ ವಕೀಲರು 60-70 ವರ್ಷಗಳ ದಾಖಲೆ ಪರಿಶೀಲಿಸಲು ಕೇಳುತ್ತಾರೆ.
- ವಂಶವೃಕ್ಷ ಮತ್ತು ವಾರಸುದಾರರು: ಆಸ್ತಿಯು ಪಿತ್ರಾರ್ಜಿತವಾಗಿದ್ದರೆ (Inherited Property), ಮರಣ ಪ್ರಮಾಣಪತ್ರ, ವಂಶವೃಕ್ಷ, ಕುಟುಂಬದ ಎಲ್ಲಾ ವಾರಸುದಾರರ ಒಪ್ಪಿಗೆ ಇದೆಯೇ ಎಂದು ಪರಿಶೀಲಿಸಿ. ಜಂಟಿ ಮಾಲೀಕತ್ವವಿದ್ದರೆ ಪ್ರತಿಯೊಬ್ಬ ಮಾಲೀಕರೂ ಮಾರಾಟಕ್ಕೆ ಸಹಿ ಮಾಡುವುದು ಕಡ್ಡಾಯ.
ಋಣಭಾರ ಪ್ರಮಾಣಪತ್ರ (Encumbrance Certificate – EC)
ಆಸ್ತಿಯ ಮೇಲೆ ಯಾವುದೇ ಬ್ಯಾಂಕ್ ಸಾಲ, ಅಡಮಾನ (Mortgage), ಕೋರ್ಟ್ ಜಪ್ತಿ ಅಥವಾ ಇತರ ಯಾವುದೇ ನೋಂದಾಯಿತ ವ್ಯವಹಾರಗಳು ಇವೆಯೇ ಎಂದು ತಿಳಿಯಲು ಇ-ಸಿ (EC) ಅತ್ಯಗತ್ಯ.
- ಕನಿಷ್ಠ ೩೦ ವರ್ಷಗಳ (ಅಥವಾ ಲಭ್ಯವಿರುವ ಗರಿಷ್ಠ ಅವಧಿಯ) ಇ-ಸಿ ಯನ್ನು ಫಾರ್ಮ್ ೧೫ (Form 15) ರಲ್ಲಿ ಸಬ್-ರಿಜಿಸ್ಟ್ರಾರ್ ಕಚೇರಿಯಿಂದ ಪಡೆದು ಪರಿಶೀಲಿಸಿ.
- ಆಸ್ತಿಯ ಮೇಲೆ ಯಾವುದೇ ವ್ಯವಹಾರ ನಡೆಯದಿದ್ದರೆ ಇ-ಸಿ ಫಾರ್ಮ್ ೧೬ (Form 16 – Nil Encumbrance) ರಲ್ಲಿ ಬರುತ್ತದೆ.
ಕಂದಾಯ ದಾಖಲೆಗಳು: ಆರ್ಟಿಸಿ (RTC)ಮತ್ತು ಖಾತಾ (Khata)
ಕೃಷಿ ಜಮೀನಿಗೆ (Agricultural Land):
- ಆರ್ಟಿಸಿ / ಪಹಣಿ (RTC/Pahani):ಜಮೀನಿನ ಮಾಲೀಕರ ಹೆಸರು, ವಿಸ್ತೀರ್ಣ, ಬೆಳೆ ಮತ್ತು ಯಾವುದೇ ಸಾಲದ ನಮೂದು ಇದೆಯೇ ಎಂದು ನೋಡಿ.
- ಮ್ಯುಟೇಷನ್ ಎಕ್ಸ್ಟ್ರಾಕ್ಟ್ (MR Extract):ಹಕ್ಕು ಬದಲಾವಣೆಯ ರಿಜಿಸ್ಟರ್ ಮಾಹಿತಿ.
- ಅಕಾರಬಂಧ್, ಟಿಪ್ಪಣಿ ಮತ್ತು ಸರ್ವೇ ಸ್ಕೆಚ್: ಜಮೀನಿನ ಗಡಿ ಮತ್ತು ವಿಸ್ತೀರ್ಣದ ಸರಿಯಾದ ಮಾಹಿತಿ ಪಡೆಯಲು ಈ ದಾಖಲೆಗಳನ್ನು ಪರಿಶೀಲಿಸಿ.
ನಿವೇಶನ (ಸೈಟ್) ಅಥವಾ ಮನೆಗೆ:
- ಖಾತಾ ಪ್ರಮಾಣಪತ್ರ ಮತ್ತು ಖಾತಾ ಎಕ್ಸ್ಟ್ರಾಕ್ಟ್ (Khata Certificate & Extract): ಬಿಬಿಎಂಪಿ (BBMP), ಬಿಡಿಎ (BDA) ಅಥವಾ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಂದ ನೀಡಲಾದ ಖಾತಾ ಪರಿಶೀಲಿಸಿ. (ಇ-ಖಾತಾ ಇದೆಯೇ ಎಂದು ಖಚಿತಪಡಿಸಿಕೊಳ್ಳಿ).
- ಆಸ್ತಿ ತೆರಿಗೆ ಪಾವತಿಸಿದ ರಶೀದಿಗಳು (Property Tax Receipts): ಇತ್ತೀಚಿನ ವರ್ಷಗಳ ತೆರಿಗೆ ಬಾಕಿ ಇಲ್ಲದೆ ಪಾವತಿಸಲಾಗಿದೆಯೇ ಎಂದು ನೋಡಿ.
ಖಾತಾ ಅಥವಾ ಮ್ಯುಟೇಷನ್ ದಾಖಲೆಗಳು ಕೇವಲ ತೆರಿಗೆ ವಸೂಲಾತಿಗಾಗಿ ಇರುವ ಕಂದಾಯ ದಾಖಲೆಗಳಷ್ಟೇ, ಅವು ಆಸ್ತಿಯ ಮಾಲೀಕತ್ವದ ಅಂತಿಮ ಸಾಕ್ಷಿಯಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ಭೂ ಪರಿವರ್ತನೆ (Land Conversion) ಮತ್ತು ಲೇಔಟ್ ಮಂಜೂರಾತಿ
ಕೃಷಿ ಜಮೀನನ್ನು ವಸತಿ ಉದ್ದೇಶಕ್ಕೆ ಬಳಸಲು ಕಾನೂನಿನ ಪ್ರಕಾರ ಭೂ ಪರಿವರ್ತನೆ (NA Conversion Order) ಮಾಡಿಸುವುದು ಕಡ್ಡಾಯ.
- ಭೂ ಪರಿವರ್ತನೆ: ಕರ್ನಾಟಕ ಭೂ ಕಂದಾಯ ಕಾಯ್ದೆಯ ೯೫ನೇ ಕಲಂ ಪ್ರಕಾರಜಿಲ್ಲಾಧಿಕಾರಿಗಳಿಂದ (DC Conversion) ಪಡೆದ ಮಂಜೂರಾತಿ ಪತ್ರ ಪರಿಶೀಲಿಸಿ.
- ಲೇಔಟ್ ಪ್ಲಾನ್ ಮಂಜೂರಾತಿ (Approved Layout Plan): ನಿವೇಶನವು ಬಿಡಿಎ (BDA), ಬಿಎಂಆರ್ಡಿಎ (BMRDA), ಬಿಐಎಪಿಪಿಎ (BIAPPA) ಅಥವಾ ನಗರಾಭಿವೃದ್ಧಿ ಪ್ರಾಧಿಕಾರದಿಂದ (DTCP) ಮಂಜೂರಾಗಿದೆಯೇ ಎಂದು ನೋಡಿ.
- ಸೈಟ್ ಬಿಡುಗಡೆ ಪತ್ರ (Release Order):ಪ್ರಾಧಿಕಾರವು ಆ ನಿರ್ದಿಷ್ಟ ಸೈಟ್ ಅನ್ನು ಮಾರಾಟ ಮಾಡಲು ಬಿಡುಗಡೆ ಮಾಡಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ಎಚ್ಚರಿಕೆ: ಯಾವುದೇ ಅನುಮತಿ ಇಲ್ಲದ “ರೆವಿನ್ಯೂ ಸೈಟ್ಗಳನ್ನು” (Unapproved Revenue Layouts) ಕೊಳ್ಳುವ ಮುನ್ನ ಅತ್ಯಂತ ಎಚ್ಚರಿಕೆಯಿಂದಿರಿ. ಕ್ರಯಪತ್ರ ರಿಜಿಸ್ಟರ್ ಆದ ತಕ್ಷಣ ಅಕ್ರಮ ಲೇಔಟ್ ಸಕ್ರಮವಾಗುವುದಿಲ್ಲ. ಇಂತಹ ಸೈಟುಗಳು ಖರೀದಿದಾರರಿಗೆ ಮುಂದಿನ ದಿನಗಳಲ್ಲಿ ತಲೆನೋವು ತಂದಿಡುತ್ತವೆ.
ಕೋರ್ಟ್ ವ್ಯಾಜ್ಯಗಳು ಮತ್ತು ಸರ್ಕಾರಿ ನಿರ್ಬಂಧಗಳ ಪರಿಶೀಲನೆ
- ಆಸ್ತಿಯ ಮೇಲೆ ಯಾವುದೇ ಸಿವಿಲ್ ದಾವೆ (Court Case), ತಡೆಯಾಜ್ಞೆ (Stay Order) ಅಥವಾ ಕುಟುಂಬದ ವ್ಯಾಜ್ಯಗಳಿವೆಯೇ ಎಂದು ಪರಿಶೀಲಿಸಿ.
- ಆಸ್ತಿಯು ಸರ್ಕಾರಿ ಜಮೀನು, ಗೋಮಾಳ, ಅರಣ್ಯ ಭೂಮಿ ಅಥವಾ ಸರ್ಕಾರದಿಂದ ವಶಪಡಿಸಿಕೊಂಡ (Government Acquisition) ಜಮೀನೇ ಎಂದು ಖಚಿತಪಡಿಸಿಕೊಳ್ಳಿ.
- ಪಿಟಿಸಿಎಲ್ ಕಾಯ್ದೆ (PTCL Act): ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರಿಗೆ ಸರ್ಕಾರದಿಂದ ಮಂಜೂರಾದ (Granted Land) ಜಮೀನಾಗಿದ್ದರೆ, ಸರ್ಕಾರದ ಪೂರ್ವಾನುಮತಿ ಇಲ್ಲದೆ ಮಾರಾಟ ಮಾಡಲು ಬರುವುದಿಲ್ಲ. ಅಂತಹ ಭೂಮಿ ಖರೀದಿಸಿದರೆ ಸಿಂಧುವಾಗುವುದಿಲ್ಲ ಎಂಬುದನ್ನು ನೆನಪಿಡಿ.
ಸ್ಥಳ ಪರಿಶೀಲನೆ (Physical Inspection)ಮತ್ತು ಗಡಿಗಳ ಖಾತರಿ
ಕೇವಲ ಕಾಗದದ ದಾಖಲೆಗಳನ್ನು ನೋಡಿ ಹಣ ನೀಡಬೇಡಿ. ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ:
- ಮಾರಾಟಗಾರನ ಪೂರ್ಣ ಸ್ವಾಧೀನ (Possession) ಇದೆಯೇ ಅಥವಾ ಬೇರೆ ಯಾರಾದರೂ ಬಾಡಿಗೆದಾರರು/ಆಕ್ರಮಣಕಾರರು ಇದ್ದಾರೆಯೇ ಎಂದು ನೋಡಿ.
- ದಾಖಲೆಯಲ್ಲಿರುವ ಚಕ್ಕುಬಂದಿ (Boundaries) ಮತ್ತು ವಿಸ್ತೀರ್ಣ ಸ್ಥಳದಲ್ಲಿ ಸರಿಯಾಗಿದೆಯೇ ಎಂದು ಪರಿಶೀಲಿಸಿ.
- ರಾಜಕಾಲುವೆ, ಕೆರೆ ಅಂಗಳ (Lake Buffer Zone), ವಿದ್ಯುತ್ ಹೈ-ಟೆನ್ಷನ್ ಲೈನ್ ಅಥವಾ ಸಾರ್ವಜನಿಕ ರಸ್ತೆಗಳ ನಿರ್ಬಂಧಕ್ಕೆ ಆಸ್ತಿ ಒಳಪಟ್ಟಿದೆಯೇ ಎಂದು ನೋಡಿ. ಅಗತ್ಯವಿದ್ದರೆ ಅಧಿಕೃತ ಸರ್ವೇಯರ್ ಮೂಲಕ ಅಳತೆ ಮಾಡಿಸಿ.
- ದಿಶಾಂಕ್ ನಂತಹ ಆಪ್ ಗಳಲ್ಲಿ ಜಾಗದ ಸರ್ವೆ ನಂಬರ್ ಯಾವುದೆಂದು ತಿಳಿಯಲು ಅವಕಾಶವಿದೆ. ಅದನ್ನು ಬಳಸಿ ಜಾಗದ ಮಾಹಿತಿ ತಿಳಿಯಲು ಪ್ರಯತ್ನಿಸಿ.
ಫ್ಲ್ಯಾಟ್ (Flat) ಅಥವಾ ನಿರ್ಮಿಸಿದ ಮನೆ ಕೊಳ್ಳುವಾಗ ಹೆಚ್ಚುವರಿ ಪರಿಶೀಲನೆ
ಅಪಾರ್ಟ್ಮೆಂಟ್ ಅಥವಾ ಮನೆ ಕೊಳ್ಳುವಾಗ ಇವುಗಳನ್ನು ಕಡ್ಡಾಯವಾಗಿ ಪರಿಶೀಲಿಸಿ:
- ಬಿಲ್ಡಿಂಗ್ ಪ್ಲಾನ್ ಮಂಜೂರಾತಿ (Approved Building Plan) ಮತ್ತು ಲೈಸೆನ್ಸ್.
- ಪ್ರಾರಂಭಿಕ ಪ್ರಮಾಣಪತ್ರ (CC – Commencement Certificate).
- ಸ್ವಾಧೀನ ಪ್ರಮಾಣಪತ್ರ (OC – Occupancy Certificate) – ಇದು ಅತ್ಯಂತ ಮುಖ್ಯ.
- ಕೆ-ರೇರಾ (Karnataka RERA)ನೋಂದಣಿ: RERA ವೆಬ್ಸೈಟ್ನಲ್ಲಿ ಪ್ರಾಜೆಕ್ಟ್ ನೋಂದಣಿ ಸಂಖ್ಯೆ ಮತ್ತು ವಿವರಗಳನ್ನು ಪರಿಶೀಲಿಸಿ.
- ಬಿಲ್ಡರ್ ಮತ್ತು ಜಮೀನಿನ ಮಾಲೀಕರ ನಡುವಿನ ಜಂಟಿ ಅಭಿವೃದ್ಧಿ ಒಪ್ಪಂದ (JDA).
- ಬ್ಯಾಂಕ್ಗಳಿಂದ ನಿರಾಕ್ಷೇಪಣಾ ಪತ್ರ (NOC), ಯೋಜನೆಗೆ ಯಾವುದೇ ಬ್ಯಾಂಕ್ ಸಾಲದ ಅಡಮಾನವಿಲ್ಲ ಎಂದು ಖಚಿತಪಡಿಸಿಕೊಳ್ಳಲು.
ಕ್ರಯದ ಒಪ್ಪಂದ ಪತ್ರ (Agreement to Sell)
ಆಸ್ತಿಯ ಅಂತಿಮ ನೋಂದಣಿಗೂ ಮುನ್ನ ಮಾಡಿಕೊಳ್ಳುವ ಒಪ್ಪಂದದಲ್ಲಿ ಇವು ಸ್ಪಷ್ಟವಾಗಿರಬೇಕು:
- ಆಸ್ತಿಯ ಸಂಪೂರ್ಣ ವಿವರ, ಒಟ್ಟು ಕ್ರಯದ ಮೊತ್ತ ಮತ್ತು ನೀಡಿದ ಮುಂಗಡ (Advance) ಮೊತ್ತ.
- ಬಾಕಿ ಮೊತ್ತ ಪಾವತಿಸಲು ನೀಡಲಾದ ಸಮಯ.
- ಆಸ್ತಿಯ ಮೇಲಿರುವ ಸಾಲ/ಋಣಭಾರಗಳನ್ನು ತೀರಿಸುವ ಮಾರಾಟಗಾರನ ಹೊಣೆಗಾರಿಕೆ.
- ಶರತ್ತುಗಳನ್ನು ಉಲ್ಲಂಘಿಸಿದರೆ ಪರಿಹಾರ ಮತ್ತು ಮುಂಗಡ ಹಣ ವಾಪಸ್ ನೀಡುವ ನಿಯಮಗಳು.
ಯಾವುದೇ ಕಾರಣಕ್ಕೂ ಖಾಲಿ ಕಾಗದಗಳಿಗೆ ಸಹಿ ಮಾಡಬೇಡಿ ಮತ್ತು ಮೂಲ ದಾಖಲೆಗಳ ಪರಿಶೀಲನೆ ಇಲ್ಲದೆ ದೊಡ್ಡ ಮೊತ್ತದ ಮುಂಗಡ ನೀಡಬೇಡಿ.
ಖರೀದಿಗೆ ಮುನ್ನ ವಕೀಲರ ಸಲಹೆ ಪಡೆಯಿರಿ
ಯಾವುದೇ ಸ್ಥಿರಾಸ್ತಿ ಖರೀದಿಸುವ ಮುನ್ನ ನುರಿತ ಆಸ್ತಿ ವಿಷಯಗಳ ವಕೀಲರಿಂದ (Property Advocate) ಕಾನೂನು ಅಭಿಪ್ರಾಯ (Legal Opinion) ಪಡೆಯುವುದು ಹೆಚ್ಚು ಸುರಕ್ಷಿತ. ಏಕೆಂದರೆ ದಾಖಲೆಗಳು ಕೆಲವೊಮ್ಮೆ ನಿಮಗೆ ಅರ್ಥವಾಗದಿರಬಹುದು ಅಥವಾ ಸಂಪೂರ್ಣವಾಗಿ ಪರಿಶೀಲಿಸುವ ಮಾರ್ಗ ತಿಳಿಯದೇ ಇರಬಹುದು. ಹಾಗೆಯೇ ಮಂಜೂರಾತಿ/ಅನುಮತಿ ಪತ್ರಗಳಲ್ಲಿನ ಷರತ್ತುಗಳು ನಿಮಗೆ ಸರಿಯಾಗಿ ತಿಳಿಯದೇ ಇರಬಹುದು. ಹೀಗಾಗಿ ವಕೀಲ ಮೂಲಕ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಿದ ನಂತರ ಖರೀದಿಸುವುದು ನಿಮ್ಮ ಹೂಡಿಕೆಗೆ ಹೆಚ್ಚು ಸುರಕ್ಷಿತ ಮಾರ್ಗ. ಕೇವಲ ಮಾರಾಟಗಾರರು ಅಥವಾ ಬ್ರೋಕರ್ ನೀಡುವ ಭರವಸೆಗಳನ್ನೇ ಅಂತಿಮ ಎಂದು ನಂಬಬೇಡಿ ಮತ್ತು ಖರೀದಿಸುವ ಮುನ್ನ ಎಚ್ಚರ ವಹಿಸಿ.
ಸುಪ್ರೀಂ ಕೋರ್ಟ್ನ ಪ್ರಮುಖ ತೀರ್ಪುಗಳು ಮತ್ತು ಜಾಗೃತಿ
- ಸುರಾಜ್ ಲ್ಯಾಂಪ್ ಕೇಸ್ ( Suraj Lamp Case – 2012): ಕೇವಲ ಜಿಪಿಎ (GPA), ಅಗ್ರಿಮೆಂಟ್ ಅಥವಾ ವಿಲ್ ಆಧಾರದ ಮೇಲೆ ಆಸ್ತಿಯ ಪೂರ್ಣ ಮಾಲೀಕತ್ವ ಸಿಗುವುದಿಲ್ಲ. ಕಾನೂನಾತ್ಮಕವಾಗಿ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟರ್ ಆದ ಕ್ರಯಪತ್ರವೇ ಕಡ್ಡಾಯ.
- ಜಿತೇಂದ್ರ ಸಿಂಗ್ ಕೇಸ್ (Jitendra Singh Case – 2021): ಖಾತಾ ಅಥವಾ ಪಹಣಿ (Mutation/RTC) ಹೆಸರು ಬದಲಾವಣೆಯಾದ ತಕ್ಷಣ ಆ ವ್ಯಕ್ತಿಗೆ ಮಾಲೀಕತ್ವ ಬರುವುದಿಲ್ಲ. ಕಂದಾಯ ದಾಖಲೆಗಳು ತೆರಿಗೆ ಪಾವತಿಗೆ ಮಾತ್ರ ಸೀಮಿತ.
- ಸಮಿಯುಲ್ಲಾ ಕೇಸ್ (Samiullah Case – 2025): ನೋಂದಣಿ (Registration) ಆದ ತಕ್ಷಣ ಮೂಲ ಹಕ್ಕು (Title) ಸರಿಯಾಗಿದೆ ಎಂದರ್ಥವಲ್ಲ. ಮಾರಾಟಗಾರನಿಗೆ ಮೂಲತಃ ಉತ್ತಮ ಹಕ್ಕಿದ್ದರೆ ಮಾತ್ರ ಕೊಳ್ಳುವವನಿಗೆ ಸರಿಯಾದ ಹಕ್ಕು ಸಿಗುತ್ತದೆ.
