ರಾಜಕೀಯ

ಬೆಂಗಳೂರಿನ ತ್ಯಾಜ್ಯ ನಿರ್ವಹಣೆ ಟೆಂಡರ್ ನಲ್ಲಿ ಅಕ್ರಮ ಆರೋಪ: ಶಾಸಕ ಯತ್ನಾಳ್ ಅವರು ಲೋಕಾಯುಕ್ತಕ್ಕೆ ದೂರು

Share It

ಬೆಂಗಳೂರು: ಬೆಂಗಳೂರು ಮಹಾನಗರದ ಸಮಗ್ರ ಘನತ್ಯಾಜ್ಯ ನಿರ್ವಹಣಾ ಟೆಂಡರ್ನಲ್ಲಿ ಗಂಭೀರ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ, ವಿಧಾನಸಭೆಯ ಸದಸ್ಯರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಲೋಕಾಯುಕ್ತ ಸಂಸ್ಥೆಗೆ ದೂರು ಸಲ್ಲಿಸಿದ್ದಾರೆ. ಇಬ್ಬರು ಐಎಎಸ್ ಅಧಿಕಾರಿಗಳು ಲಂಚದ ಬೇಡಿಕೆ ಇಟ್ಟಿರುವ ಹಿನ್ನೆಲೆಯಲ್ಲಿ ಈ ದೂರು ಬಹಿರಂಗವಾಗಿದೆ.

ಶಾಸಕರು ತಮ್ಮ ದೂರಿನಲ್ಲಿ, ನಗರಾಭಿವೃದ್ಧಿ ಇಲಾಖೆಯು ಹೊರಡಿಸಿದ ಸಮಗ್ರ ಘನತ್ಯಾಜ್ಯ ನಿರ್ವಹಣಾ (ಐಎಸ್ಡಬ್ಲ್ಯುಎಂ) ಟೆಂಡರ್ನಲ್ಲಿ ವ್ಯಾಪಕ ಭ್ರಷ್ಟಾಚಾರವಾಗಿರುವುದಾಗಿ ಆರೋಪಿಸಿದ್ದಾರೆ. ಅವರು ಲೋಕಾಯುಕ್ತ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ತನಿಖೆಗೆ ಆಗ್ರಹಿಸಿದ್ದಾರೆ.

ತಮ್ಮ ದೂರಿನಲ್ಲಿ ಮುಖ್ಯವಾಗಿ ಎತ್ತಿರುವ ಅಂಶಗಳಿವು:

· ಭೂಸ್ವಾಧೀನ ಮತ್ತು ಟೆಂಡರ್ ಪ್ರಕ್ರಿಯೆ ನಡೆಯುತ್ತಿರುವಾಗಲೇ ಮುಖ್ಯ ಇಂಜಿನಿಯರ್ಗಳ ವರ್ಗಾವಣೆ ಮಾಡಲಾಗಿದೆ.
· ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯನ್ನು ಉಲ್ಲಂಘಿಸಿ, ನಿರ್ದಿಷ್ಟ ಕಂಪನಿ (ರಾಮ್ಕಿ ಇಂಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್) ಗೆ ಅನುಕೂಲವಾಗುವಂತೆ ಬಿಡ್ ಅನ್ನು ಪರಿಷ್ಕರಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ಬೃಹತ್ ಪ್ರಮಾಣದ ಈ ಟೆಂಡರ್ನಲ್ಲಾದ ಕಾರ್ಯವಿಧಾನದ ಲೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಶಾಸಕರು ಆಗ್ರಹಿಸಿದ್ದಾರೆ. ಟೆಂಡರ್ ಪ್ರಕ್ರಿಯೆಯಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡವರ ಪಾತ್ರ, ಕೆಟಿಪಿಪಿ ಉಲ್ಲಂಘನೆ, ಹಣಕಾಸಿನ ನಿಯಮಗಳು, ಯೋಜನಾ ವೆಚ್ಚದಲ್ಲಿ ಬದಲಾವಣೆ ಮತ್ತು ಆಯ್ಕೆಯಾದ ಕಂಪನಿಗಳ ಬಗ್ಗೆಯೂ ತನಿಖೆಯಾಗಬೇಕು ಎಂದು ಅವರು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರಿಗೆ ಮನವಿ ಮಾಡಿದ್ದಾರೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲೂ ಈ ಆರೋಪಗಳನ್ನು ಪ್ರಸ್ತಾಪಿಸಿದ್ದಾರೆ.


Share It

You cannot copy content of this page