ಬೆಂಗಳೂರು: ಏರ್ಪೋರ್ಟ್ಗೆ ಟ್ಯಾಕ್ಸಿ ಬುಕ್ ಮಾಡಿ ಅನಂತರ ಚಾಲಕನನ್ನು ಕಿಡ್ನಾಪ್ ಮಾಡಿ ಹಣಕ್ಕಾಗಿ ಬೇಡಿಕೆಯಿಟ್ಟ ಪ್ರಕರಣ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಾಲ್ವರು ಏರ್ಪೋರ್ಟ್ಗೆ ಹೋಗಲೆಂದು ಟ್ಯಾಕ್ಸಿ ಬುಕ್ ಮಾಡಿದ್ದರು. ಅನಂತರ ಬಾಗಲೂರು ಬಳಿ ಬಂದಾಗ ಕಾರು ನಿಲ್ಲಿಸಿದ್ದು, ಚಾಲಕನಿಗೆ ಚಾಕು ತೋರಿಸಿ, ಹಣ ನೀಡುವಂತೆ ಬೆದರಿಕೆ ಹಾಕಿದ್ದರು. ಹೆದರಿದ ಚಾಲಕ ನನ್ನ ಬಳಿ ಹಣವಿಲ್ಲ, ನನ್ನ ಫ್ರೆಂಡ್ ಬಳಿ ಇದೆ ಎಂದು ಹೇಳಿದ್ದ. ಹೀಗಾಗಿ, ಆತನ ಸ್ನೇಹಿತನನ್ನು ಸ್ಥಳಕ್ಕೆ ಕರೆಸಿಕೊಂಡಿದ್ದರು. ಈ ವೇಳೆ ಅವರಿಂದ ತಪ್ಪಿಸಿಕೊಂಡ ಚಾಲಕನ ತಕ್ಷಣವೇ 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದ.
ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು, ಚಾಲಕನ ರಕ್ಷಣೆ ಮಾಡಿದ್ದರು. ಆದರೆ, ಆರೋಪಿಗಳು ಪರಾರಿಯಾಗಿದ್ದರು. ಹೀಗಾಗಿ, ಚಾಲಕ ನೀಡಿದ ದೂರಿನ ಆಧಾರದಲ್ಲಿ ಬಾಗಲೂರು ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗೆ ಕಾರ್ಯಾಚರಣೆ ರೂಪಿಸಿದ್ದಾರೆ.

