ಮಂಚೇರಿಯಲ್(ತೆಲಂಗಾಣ): ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆ 2 ಕೋಟಿ ರೂಪಾಯಿ ವಿಮೆ ಹಣಕ್ಕೆ ಗಂಡನನ್ನು ಕೊಂದು ರಸ್ತೆ ಅಪಘಾತ ಎಂದು ಬಿಂಬಿಸಲು ಮುಂದಾಗಿ ಕೊನೆಗೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ.
ಮೇ 22ರಂದು ಹಾಜಿಪುರ ಮಂಡಲದ ಗುಡಿಪೇಟೆಯ ಸೈನಿ ಕುಮಾರ್ (45) ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ತೀವ್ರ ಗಾಯಗೊಂಡ ಅವರನ್ನು ಸ್ಥಳೀಯರು ಕರೀಂನಗರ ಆಸ್ಪತ್ರೆಗೆ ಅಂಬುಲೆನ್ಸ್ನಲ್ಲಿ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದರು. ಈ ಕುರಿತು ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದರು.
ಸೈನಿ ಕುಮಾರ್ ಅವರ ಪತ್ನಿ ಭಾರತಿ ಗುಡಿಪೇಟೆ ಲಗಿಸೆಟ್ಟಿ ಸುರೇಂದರ್ ಎಂಬವನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದು, ಇದಕ್ಕೆ ಅಡ್ಡಿಯಾಗಿದ್ದ ಪತಿ ಕುಮಾರ್ನನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದಳು. ಪತಿ ಎಲ್‌ಐಸಿ ಸೇರಿ ಹಲವು ವಿಮಾ ಕಂಪನಿಗಳಲ್ಲಿ ಪ್ರೀಮಿಯಂ ಪಾವತಿಸುತ್ತಿದ್ದರಿಂದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರೆ, ತನಗೆ 2 ಕೋಟಿ ರೂಪಾಯಿ ಸಿಗುತ್ತದೆ ಎಂದು ಯೋಜನೆ ರೂಪಿಸಿದ್ದಳು.
ಈ ನಡುವೆ ಕುಮಾರ್ ಗುಡಿಪೇಟೆ ರಾಮ್ ಮಲ್ಲೇಶ್ ಅವರಿಂದ 60 ಸಾವಿರ ರೂ ಹಣ ಪಡೆದು ಪಾವತಿಸಿರಲಿಲ್ಲ. ಈ ವ್ಯವಹಾರದಲ್ಲಿ ಮಲ್ಲೇಶ್ ಕುಮಾರ್‌ಗೆ ಭಾರತಿ ಪರಿಚಯವಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಭಾರತಿ, ಮಲ್ಲೇಶ್ಗೆ ಪತಿಯನ್ನು ಕೊಂದರೆ 10 ಲಕ್ಷ ನೀಡುವುದಾಗಿ ತಿಳಿಸಿ, ಮುಂಗಡ 2 ಲಕ್ಷ ರೂ ಹಣ ಕೊಟ್ಟಿದ್ದಳು. ಮಲ್ಲೇಶ್ ಮಂಚೇರಿಯಲ್‌ನ ಎಲ್‌ಐಸಿ ಕಾಲೊನಿ ಶ್ರೀರಾಮ್ ಎಂಬಾತನ ಜತೆ ಸೇರಿ ಕೊಲೆಗೆ ಸ್ಕೆಚ್ ಹಾಕಿದ್ದಾರೆ.
ಯೋಜನೆಯಂತೆ ಮಲ್ಲೇಶ್ ಮತ್ತು ಶ್ರೀರಾಮ್ ಮೇ 22ರಂದು ಕುಮಾರ್‌ಗೆ ಮದ್ಯ ಕುಡಿಸಿ ತಲೆಗೆ ಸುತ್ತಿಗೆಯಿಂದ ಹೊಡೆದು, ರಸ್ತೆ ಅಪಘಾತವೆಂದು ಬಿಂಬಿಸಲು ಕುಮಾರ್ ಮತ್ತು ಆತನ ದ್ವಿಚಕ್ರ ವಾಹನವನ್ನು ರಸ್ತೆ ಬದಿಯಲ್ಲೇ ಬಿಟ್ಟು ಪರಾರಿಯಾಗಿದ್ದರು. ಕುಮಾರ್ ತಾಯಿ ಲಕ್ಷ್ಮಿ ತಮ್ಮ ಮಗನ ಸಾವಿನಲ್ಲಿ ರಾಮ್ ಮಲ್ಲೇಶ್ ಮೇಲೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ನಂತರ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಈ ವೇಳೆ ಪತ್ನಿಯ ನಡವಳಿಕೆ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ತೀವ್ರ ಪರಿಶೀಲನೆ ನಡೆಸಿದ್ದಾರೆ.
ಎಸಿಪಿ ಪ್ರಕಾಶ್ ಮತ್ತು ಮಂಚೇರಿಯಲ್ ಗ್ರಾಮೀಣ ಸಿಐ ರವೀಂದರ್ ತಂಡದ ತನಿಖೆಯಲ್ಲಿ, ಇದು ರಸ್ತೆ ಅಪಘಾತವಲ್ಲ, ಕೊಲೆ ಎಂಬುದನ್ನು ಕಂಡುಕೊಂಡಿದ್ದಾರೆ. ಆರೋಪಿಗಳಿಂದ ಪ್ರೀಮಿಯಂ ಮತ್ತು 25 ಸಾವಿರ ರೂ. ನಗದು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಾದ ಭಾರತಿ, ಸುರೇಂದರ್ ಮತ್ತು ಶ್ರೀರಾಮ್ ಎಂಬವರನ್ನು ಬಂಧಿಸಲಾಗಿದೆ. ರಾಮ್ ಮಲ್ಲೇಶ್ ತಲೆಮರೆಸಿಕೊಂಡಿದ್ದು, ಶೋಧ ನಡೆಯುತ್ತಿದೆ.

