ರಾಜಕೀಯ ಸುದ್ದಿ

ಸಿಎಂ ಸಿದ್ದರಾಮಯ್ಯ ರಾಜೀನಾಮೆ‌ ನೀಡಿದರೆ ಬೇರೆ ಸಿಎಂ ಆಡಳಿತ ಸುಲಭವಲ್ಲ: ಬಿ.ವೈ. ವಿಜಯೇಂದ್ರ

Share It

ಶಿವಮೊಗ್ಗ: ‘ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ‌ ನೀಡಿದರೆ, ಬೇರೆ ಸಿಎಂ ಆಡಳಿತ ಸುಲಭವಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಕುರಿತು ನಗರದಲ್ಲಿಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕಳೆದ ಮೂರು ವರ್ಷಗಳಲ್ಲಿ ಉತ್ತಮ ಆಡಳಿತ ಕೊಡಲು ಆಗಿಲ್ಲ. ಇದನ್ನು ಕಾಂಗ್ರೆಸ್ ಹೈಕಮಾಂಡ್ ಅನುಮೋದಿಸಿದೆ. ನಿನ್ನೆ ದೆಹಲಿಯಲ್ಲಿ 5 ಗಂಟೆಗಳ ಕಾಲ ಮ್ಯಾರಥಾನ್ ಸಭೆ ನಡೆದಿದೆ. ಸಿಎಂ ರಾಜೀನಾಮೆ ತೆಗೆದುಕೊಳ್ಳುವ ತೀರ್ಮಾನ ಮಾಡಿದ್ದಾರೆ. ಒಟ್ಟಾರೆ ದೇಶದಲ್ಲಿ ಕಾಂಗ್ರೆಸ್ ಕೊನೆ ದಿನಗಳನ್ನು ನೋಡುತ್ತಿದೆ. ರಾಜ್ಯದಲ್ಲೂ ಕಾಂಗ್ರೆಸ್ ಅವನತಿಯತ್ತ ಸ್ಪಷ್ಟವಾಗಿ ಹೋಗುತ್ತಿರುವ ಮುನ್ಸೂಚನೆ ಇದಾಗಿದೆ’ ಎಂದರು.

‘ಸಿದ್ದರಾಮಯ್ಯ ಇವತ್ತು ಅಥವಾ ನಾಳೆ ರಾಜೀನಾಮೆ ಕೊಟ್ಟು ಯಾರು ಸಿಎಂ ಆಗುತ್ತಾರೆ ಅನ್ನೋದು ಮುಖ್ಯ ಅಲ್ಲ. ರಾಜ್ಯ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಆಲೋಚಿಸಬೇಕು. ಸಿಎಂ ಅವರ ಬಗ್ಗೆ ನನಗೆ ವೈಯಕ್ತಿಕ ದ್ವೇಷವೇನೂ ಇಲ್ಲ. ಅವರು ಅತೀ ಹೆಚ್ಚು ಅನುಭವ ಇರುವಂತಹವರು. 10 ಲಕ್ಷ ಕೋಟಿ ರೂ.‌ ಸಾಲವನ್ನು ಮಾಡಿದ್ದಾರೆ‌. ರಾಜ್ಯದ ಜನತೆ ಯಾವ ರೀತಿ ಸಾಲದ ಸುಳಿಗೆ ಸಿಲುಕಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಟೀಕಿಸಿದರು.

‘ಆಂತರಿಕ ಕಚ್ಚಾಟದಿಂದ ಆಡಳಿತ ಸಂಪೂರ್ಣ ಕುಸಿದಿತ್ತು. ಭ್ರಷ್ಟಾಚಾರ ಕೂಡ ಹೆಚ್ಚಾಗಿತ್ತು. ವಾಲ್ಮೀಕಿ ಅಭಿವೃದ್ಧಿ ನಿಗಮ, ಮುಡಾ ಹಗರಣವನ್ನು ನಾವೆಲ್ಲಾ ನೋಡಿದ್ದೇವೆ. ರಾಜ್ಯದ ಇತಿಹಾಸದಲ್ಲಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡದ್ದು ಇದ್ದರೆ ಅದು ಇದೇ ಸಿದ್ದರಾಮಯ್ಯ ಸರ್ಕಾರದಲ್ಲಿ’ ಎಂದು ಆರೋಪಿಸಿದ ರಾಜ್ಯಾಧ್ಯಕ್ಷರು ‘ಇದು ಜನ ವಿರೋಧಿ ಸರ್ಕಾರವಾಗಿದೆ. ರಾಜ್ಯ ಸರ್ಕಾರ ಉಪ ಚುನಾವಣೆ ಗೆದ್ದಿದ್ದಾರೆ. ಅದು ಮಾನದಂಡವಾಗಲು ಸಾಧ್ಯವಿಲ್ಲ. ಅದು ಮಾನದಂಡವಾಗಿದ್ದರೆ, ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪರಿಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ’ ಎಂದರು.

‘ರಾಜ್ಯದಲ್ಲಿ ಅಭಿವೃದ್ಧಿ ಇಲ್ಲದೇ ಭ್ರಷ್ಟಾಚಾರದಲ್ಲಿ ಕಾಂಗ್ರೆಸ್​ ಸರ್ಕಾರ ಮುಳುಗಿ ಹೋಗಿತ್ತು. ಕೊನೆಗೂ ಕಾಂಗ್ರೆಸ್​ ಹೈಕಮಾಂಡ್​ ಒಪ್ಪಿ ಸಿಎಂ ಬದಲಾವಣೆಗೆ ಕೈ ಹಾಕಿದೆ. ನಾನು ಶಾಸಕನಾಗಿ ಒಂದು ಮಾತು ಹೇಳ್ತೇನೆ, ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಯಾರೇ ಸಿಎಂ ಆದ್ರೂ ಅದು ತಾತ್ಕಾಲಿಕ. ಅವಧಿ ಪೂರ್ವ ಚುನಾವಣೆ ರಾಜ್ಯದಲ್ಲಿ ಬರೋದನ್ನು ಯಾರು ತಡೆಯಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಬಿಟ್ಟು ಯಾರೇ ಸಿಎಂ ಆದರೂ ಆಡಳಿತದಲ್ಲಿ ಗೊಂದಲ ಆಗುತ್ತೇ ನೋಡಿ’ ಎಂದು ಭವಿಷ್ಯ ನುಡಿದರು.

‘ಸಂಘಟನೆ ಶಕ್ತಿಯ ಮೂಲಕ ಬಲಪಡಿಸಿ ಕೆಲಸ ಮಾಡುತ್ತೇವೆ. ಅಧಿಕಾರಕ್ಕೆ ಬರಲು ಒಟ್ಟಾಗಿ ಹೋಗುತ್ತೆವೆ. ಸಿಎಂ ಸಿದ್ದರಾಮಯ್ಯ ಅಷ್ಟು ಸುಲಭವಾಗಿ ರಾಜೀನಾಮೆ ಕೊಡ್ತಾರೆ ಅಂತಾ ನನಗನಿಸಲ್ಲ. ಆದರೆ, ಹೈಕಮಾಂಡ್ ತೀರ್ಮಾನ ಮಾಡಿದ್ದರಿಂದ ರಾಜೀನಾಮೆ ಕೊಡುವ ಅನಿವಾರ್ಯತೆಯಿದೆ. ಯಾರು ಸಿಎಂ ಆಗುತ್ತಾರೆ ಅಂತಾ ಭಗವಂತನಿಗೆ ಗೊತ್ತು’ ಎಂದು ಹೇಳಿದರು.


Share It

You cannot copy content of this page